ಗುಹಾ ವಾಸ್ತು, ಶಿಲ್ಪ

ದೊಡ್ಡ ಬಂಡೆಯ ಅಥವಾ ಬೆಟ್ಟದ ಕಡಿದಾದ ಮುಖದಲ್ಲಿ ಒಳಭಾಗಕ್ಕೆ ತೋರುವ ಆವರಣವೇ ಗುಹೆ. ಇದು ಸ್ವಾಭಾವಿಕವಾಗಿ ಆಗಿರಬಹುದು ಅಥವಾ ಮಾನವನಿರ್ಮಿತವಾಗಿರಬಹುದು. ವಾಸ್ತು ಎಂಬ ಪದ ಮಾನವನಿರ್ಮಿತ ಕೃತಿಗಳಿಗೆ ಮೀಸಲಾಗಿರುವುದರಿಂದ ಗುಹಾ ವಾಸ್ತು ಸಹ ಕೃತಕ ರಚನೆಗಳಿಗೆ ಮಾತ್ರ ಅನ್ವಯಿಸುತ್ತದೆ. ತಂತ್ರ ಮತ್ತು ಉದ್ದಿಶ್ಯದಲ್ಲಿ ಗುಹಾವಾಸ್ತುವನ್ನೇ ಹೋಲುವ ಕೆಲವು ಕೃತಿಗಳನ್ನು, ಅವು ಸ್ವರೂಪದಲ್ಲಿ ಒಳ ಆವರಣವುಳ್ಳ ಗುಹೆಗಳನ್ನು ಹೋಲದಿದ್ದರೂ, ಇದೇ ಪದದ ಚೌಕಟ್ಟಿನಲ್ಲಿ ಅಳವಡಿಸುವುದು ಕಲಾಚರಿತ್ರಕಾರರ ರೂಢಿ. ಈ ವಿಸ್ತøತ ಅರ್ಥವನ್ನು ಒಳಗೊಳ್ಳುವಂತೆ, ಗುಹಾ ವಾಸ್ತವೆಂದರೆ ಶಿಲೆಯಲ್ಲಿ ಕಂಡರಿಸಿದ ವಾಸ್ತು ಎಂದು ಪರ್ಯಾಯವಾಗಿ ಪರಿಗಣಿಸುವ ವಾಡಿಕೆ ಈಚೆಗೆ ಬೆಳೆದಿದೆ. 

	ಗುಹಾ ವಾಸ್ತು ರಚನಾತಂತ್ರ ಕಟ್ಟಡ ರಚನಾತಂತ್ರಕ್ಕೆ ವ್ಯತಿರಿಕ್ತವಾದ್ದು. ಕಟ್ಟಡ ನಿರ್ಮಾಣದಲ್ಲಿ ಬಿಡಿ ವಸ್ತುಗಳನ್ನು ಪೂರ್ವ ನಿಷ್ಕರ್ಷಿತ ವಿನ್ಯಾಸದಲ್ಲಿ ಜೋಡಿಸಿ ಒಂದು ಇಡೀ ರಚನೆಯನ್ನಾಗಿಸುವ ತಂತ್ರವಿದ್ದರೆ, ಗುಹಾ ವಾಸ್ತುವಿನಲ್ಲಿ ಇಡಿಯಾದ ಒಂದು ಬಂಡೆಯನ್ನು ಛೇದಿಸಿ ಆವರಣವನ್ನು ಸೃಷ್ಟಿಸುವುದು ಪದ್ಧತಿ. ಮೊದಲನೆಯದರ ಮೂಲಸೂತ್ರ ಸಂಕಲನ, ಎರಡನೆಯದರದು ವ್ಯವಕಲನ. ಗುಹಾ ವಾಸ್ತು ಈ ದೃಷ್ಟಿಯಿಂದ ಶಿಲ್ಪತಂತ್ರಕ್ಕೆ ಸಮೀಪವಾಗಿದೆ. ಛೇದನ ಕ್ರಿಯೆ ಎರಡರಲ್ಲೂ ಸಾಮಾನ್ಯ. ಆದರೆ ಶಿಲ್ಪದಲ್ಲಿ ಈ ಕ್ರಿಯೆಯ ಪರಿಣಾಮ ಘನ; ಗುಹಾ ವಾಸ್ತುವಿನಲ್ಲಿ ಇದು ಶೂನ್ಯಾವರಣ. ಈ ವಿಕೃತ ಸಂಬಂಧದಿಂದಾಗಿ ಗುಹಾ ವಾಸ್ತುವನ್ನು ಋಣಾವಸ್ತು ಅಥವಾ ಋಣಶಿಲ್ಪ ಎಂದು ಕರೆಯುವುದು ರೂಢಿ. 
ಗುಹಾ ವಾಸ್ತು ಕೃತಿಗಳಲ್ಲಿ ಇತರ ವಾಸ್ತುಗಳಲ್ಲಿರುವಂತೆಯೇ ಒಳ ಆವರಣವಿದ್ದರೂ, ಮುಮ್ಮುಖವೊಂದನ್ನು ಬಿಟ್ಟು ಬೇರೆ ಹೊರಮೈಯ ಅಭಾವವಿರುವುದರಿಂದ, ಶಿಲ್ಪಾಲಂಕರಣವೆಲ್ಲ ಒಳ ಮತ್ತು ಮುಮ್ಮುಖಗಳಿಗಷ್ಟೇ ಸೀಮಿತವಾಗುತ್ತದೆ. ಈ ಶಿಲ್ಪಗಳು ಗುಹಾ ವಾಸ್ತುವಿನ ಮುಖ್ಯ ಉದ್ದಿಶ್ಯವಾದ ಒಳ ಆವರಣಕ್ಕೆ ಬಾಧೆಯಾಗದಂತೆ ಇರಬೇಕಾಗಿರುವುದರಿಂದ, ಗುಹಾ ವಾಸ್ತುವಿನಲ್ಲಿ ಶಿಲ್ಪವಿದ್ದರೆ ಅದು ಅಲಂಕರಣವಾಗಿ ಸಹಯೋಗಿಯಾಗಿ ಮಾತ್ರ ಇರುತ್ತದೆ. 

ಗುಹೆಗಳು ಶಿಲಾಯುಗದ ಕಾಲದಿಂದಲೇ ಮಾನವನ ವಾಸಸ್ಥಾನಗಳಾಗಿದ್ದರೂ ಈ ರೂಢಿಗೂ ಗುಹಾ ವಾಸ್ತುವಿಗೂ ಯಾವ ಸಂಬಂಧವೂ ಇಲ್ಲ. ಗುಹಾ ವಾಸ್ತುವನ್ನು ರಚಿಸಲು ಗಟ್ಟಿಕಲ್ಲನ್ನು ಛೇದಿಸಬೇಕಾದರೆ ಲೋಹದ ಆಯುಧಗಳು ಆವಶ್ಯಕವಾಗುತ್ತವೆ. ಲೋಹದ ಜ್ಞಾನ ಬೆಳೆದದ್ದು ಮಾನವನ ಇತಿಹಾಸದಲ್ಲಿ ಕೇವಲ ಸುಮಾರು 5,000 ವರ್ಷಗಳ ಹಿಂದೆ; ಆ ಹೊತ್ತಿಗೆ ಮಾನವ ಸಮಾಜದ ವ್ಯವಸ್ಥೆ ಶಿಲಾಯುಗದ ಸ್ಥಿತಿಯಿಂದ ಬಹಳಷ್ಟು ಬದಲಾಗಿ ಗ್ರಾಮ ಮತ್ತು ನಗರಗಳು ಬೆಳೆದಿದ್ದು, ಗುಹಾ ವಾಸ ಪದ್ಧತಿ ನಾಗರಿಕ ಸಮಾಜದಲ್ಲಿ ತೊರೆದುಹೋಗಿದ್ದಿತಲ್ಲದೆ, ನವಸಮಾಜವ್ಯವಸ್ಥೆಗೆ ಅನುಕೂಲವಾಗುವ ಅನೇಕ ರೀತಿಯ ಹೊಸ ವಾಸ್ತು ಪದ್ಥತಿಗಳು ಬಳಕೆಗೆ ಬಂದಿದ್ದುವು. ಸಹಜವಾಗಿ ಈ ಕಾಲದಲ್ಲಿ ಪ್ರಾರಂಭವಾದ ಗುಹಾ ವಾಸ್ತುವೂ ರೂಪ, ಉದ್ದಿಶ್ಯಗಳಲ್ಲಿ ತತ್ಕಾಲೀನ ರಚನಾವಾಸ್ತುವನ್ನೇ ಅನುಸರಿಸುತ್ತದೆ. 
ಈಜಿಪ್ಟ್ ದೇಶದಲ್ಲಿ ಸುಲಭವಾಗಿ ಕೊರೆಯಲು ಅನುಕೂಲವಾದ ಬಂಡೆಗಳು ಇದ್ದು, ಲೋಹದ ಉಪಯೋಗವೂ ಬಹು ಮುಂಚೆ ಹರಡಿದ್ದುದರಿಂದ ವಿಶ್ವದ ಮೊಟ್ಟಮೊದಲ ಗುಹಾ ವಾಸ್ತು ಕೃತಿಗಳೆಲ್ಲ ಈ ದೇಶದಲ್ಲಿ ಇವೆ. ಈ ಪ್ರಾಚೀನ ಕೃತಿಗಳೆಲ್ಲ ಸಮಾಧಿಗಳು. ತತ್ಪೂರ್ವ ನಾಗರಿಕ ಸಮಾಜದಲ್ಲಿ ಛೇದನದಿಂದ ನಿರ್ಮಿಸಲಾದ ಆವರಣದ ಉಪಯೋಗ ಶವಸಂಸ್ಕಾರಕ್ಕೆ ಮಾತ್ರ ಮೀಸಲಾಗಿತ್ತು. ಹೆಣ ಹೂಳಲು ಗಟ್ಟಿ ನೆಲದಲ್ಲಿ ಹಳ್ಳಗಳನ್ನು ತೋಡುತ್ತಿದ್ದ ಪದ್ಧತಿ ನ್ಯೂಬಿಯ, ಫಯೂಮ್ ಮುಂತಾದೆಡೆಗಳಲ್ಲಿ ಕ್ರಿ.ಪೂ. 4ನೆಯ ಸಹಸ್ರಮಾನದಲ್ಲೆ ಇತ್ತು. ಈ ಛೇದಿತ ಶವಗುಳಿಗಳೇ ಈಜಿಪ್ಟಿನ ಗುಹಾ ವಾಸ್ತುವಿನ ಮೊದಲ ಘಟ್ಟವಾಗಿರಬಹುದೆಂದು, ಈ ಎರಡೂ ರೀತಿಯವುಗಳ ಉದ್ದಿಶ್ಯ ಶವಸಂಸ್ಕಾರವೇ ಆಗಿರುವುದರಿಂದ, ಊಹಿಸಬಹುದಾಗಿದೆ. ಗುಹಾ ವಾಸ್ತು ರಚನೆ ಸಾಮಾನ್ಯ ಸಮಾಧಿಗಳಿಗಿಂತ ಹೆಚ್ಚು ಶ್ರಮದಾಯಕವೂ ಅಧಿಕ ವೆಚ್ಚದ್ದೂ ಆದ್ದರಿಂದ ಇಂಥ ಕೃತಿಗಳು ರಾಜನ ಅಥವಾ ಶ್ರೀಮಂತ ಆಸ್ಥಾನಿಕರ ಸತ್ತಾಗಿದ್ದುವು. ಜೊತೆಗೆ, ಮೃತನಾದವನು ಬದುಕಿದ್ದಾಗ ಇಹದಲ್ಲಿ ಅನುಭವಿಸುತ್ತಿದ್ದ ಸಮಸ್ತ ಅನುಕೂಲಗಳೂ ಇಲ್ಲಿಯ ರೀತಿಯ ವಾಸಸ್ಥಾನವೂ ಮರಣಾನಂತರವೂ ಅವನಿಗೆ ಬೇಕಾಗುತ್ತವೆ ಎಂಬ, ತತ್ಕಾಲೀನ ಈಜಿಪ್ಪಿನಲ್ಲಿ ಹರಡಿದ್ದ, ಮರಣೋತ್ತರ ಸ್ಥಿತಿಯನ್ನು ಕುರಿತು, ನಂಬಿಕೆಗಳು ಗುಹಾ ವಾಸ್ತುರಚನೆಯನ್ನು ಪ್ರೋತ್ಸಾಹಿಸಿದವು. ಈ ಸಂಪ್ರದಾಯ ಕ್ರಿಸ್ತ ಪೂರ್ವ ಸು. 6ನೆಯ ಶತಮಾನದ ವರೆಗೂ ಅಲ್ಲಿ ನಡೆದು ಬಂದದ್ದಲ್ಲದೆ, ಇದರ ಪ್ರಭಾವ ಸುತ್ತಲಿನ ದೇಶಗಳಿಗೂ ಹರಡಿ ಗುಹಾ ವಾಸ್ತು ರಚನೆಗೆ ಉತ್ತೇಜಕವಾಯಿತು. ಆಫ್ರಿಕ ಮತ್ತು ಏಷ್ಯದ ಹಲವೆಡೆಗಳಲ್ಲಿ ಈ ಗುಹಾ ವಾಸ್ತು ಸಂಪ್ರದಾಯ ಕ್ರಿ. ಶ. 16-17ನೆಯ ಶತಮಾನದವರೆಗೂ ನಡೆದು ಬಂತು. ಆದರೆ ಕ್ರಮೇಣ ಗುಹಾ ವಾಸ್ತು ಸಮಾಧಿಗಳಿಗಷ್ಟೇ ಮೀಸಲಾಗದೆ, ದೇಶ ಕಾಲ ಪ್ರಭಾವದಿಂದಾಗಿ ಇತರ ಅನೇಕ ಧಾರ್ಮಿಕ ಅವಶ್ಯಕತೆಗಳಿಗೂ ಬಳಕೆಯಾಯಿತು. 

ಈಜಿಪ್ಟ್ : ಗುಹಾ ವಾಸ್ತುವಿನಲ್ಲಿ ಅತ್ಯಂತ ಪ್ರಾಚೀನವಾದ ಕೃತಿ (ಕ್ರಿ. ಪೂ. ಸು. 2500) ನೈಲ್ ನದಿಯ ಕೆಳಕಣಿವೆಯಲ್ಲಿ ಮೆದುಮ್ ಎಂಬಲ್ಲಿದೆ. ಇದು ಅತೆತ್ ಎಂಬ ರಾಜ್ಯಾಧಿಕಾರಿಯ ಸಮಾಧಿ. ಇದರ ವಿನ್ಯಾಸ ಶಿಲುಬೆಯಾಕಾರದಲ್ಲಿದೆ; ಒಂದು ನೇರ ಸುರಂಗವೂ ಅದನ್ನು ಮಧ್ಯದಲ್ಲಿ ಕತ್ತರಿಸುವ ಅಡ್ಡವಾದ ಕೋಚು ಅಂಕಣವೂ ಇವೆ. ಶವಕೋಣೆ ಪ್ರವೇಶದ್ವಾರದ ನೇರ ಎದುರಿನಲ್ಲಿ ಹಿಂಗೋಡೆಯಲ್ಲಿದೆ. ಈ ಸಮಾಧಿ ವಿನ್ಯಾಸದಲ್ಲಿ ರಳವೂ ಗಾತ್ರದಲ್ಲಿ ಚಿಕ್ಕದೂ ಆಗಿರುವುದಲ್ಲದೆ, ನೈಲ್ ಮುಖಜಭೂಮಿಯ ಬೃಹತ್ ಪಿರಮಿಡ್ಡುಗಳು ಅಥವಾ ಬೃಹತ್ ದೇವಾಲಯಗಳ ಅಡಿಯಲ್ಲಿರುವ ಭೂಗತ ಸಮಾಧಿ ಕೋಣೆಗಳ ವಿನ್ಯಾಸವನ್ನು ಸ್ವಲ್ಪ ಮಟ್ಟಿಗೆ ಹೋಲುತ್ತದೆ. ಈ ಸಮಾಧಿಯಲ್ಲಿ ಅಲಂಕರಣವಿಲ್ಲ. ಆದರೆ ಆ ಸುಮಾರಿನಲ್ಲೆ ಶಿಲ್ಪಾಲಂಕರಣವೂ ಪ್ರಾರಂಭವಾಗಿರಬೇಕೆಂಬುದರ ಕುರುಹು ಗೀಜ ಬಳಿಯಲ್ಲಿರುವ ರಾಣಿ 3ನೆಯ ಮೆರೆಸಂಖಳ ಸಮಾಧಿಯ ಭಾಗವಾಗಿರುವ, ಶಿಲೆಯಿಂದ ಕಂಡರಿಸಿದ ಕೋಣೆಯ ಶಿಲ್ಪಗಳೆಂದು ತಿಳಿಯುತ್ತದೆ. 

	ಈಜಿಪ್ಟಿನ ಹೆಚ್ಚಿನ ಗುಹಾ ಸಮಾಧಿಗಳು ಮೇಲಣ ಈಜಿಪ್ಟ್ ಪ್ರದೇಶದಲ್ಲಿವೆ. ಇವು ಬಹುವಾಗಿ ಅಲ್ಲಿಯ ಮಾಗಣೆಗಾರರವು (ಪ್ರಾಂತ್ಯಾಧಿಕಾರಿಗಳು). ಹಳೆಯ ರಾಜ್ಯ ಕಾಲದ ಗುಹಾವಾಸ್ತುವಿನ ಉದಾಹರಣೆಗಳಾಗಿ ಎಲ್ ಬೆರ್ಷೇ ಮತ್ತು ಎಲ್ ಷೀಕ್ ಸ ಇದ್ ನ ಸಮಾಧಿಗಳನ್ನು ಹೆಸರಿಸಬಹುದು. ಇವು ಕ್ರಿ.ಪೂ. 2300ರ ಸುಮಾರಿನಲ್ಲಿ ಈಜಿಪ್ಟಿನ 15ನೆಯ ಮಾಗಣೆಯಲ್ಲಿ ಆಳುತ್ತಿದ್ದವರ ಸಮಾಧಿಗಳು. ಇವು ಮೂಲವಿನ್ಯಾಸದಲ್ಲಿ ಮೆದುಮ್ ಸಮಾಧಿಯನ್ನೇ ಹೋಲುತ್ತವೆಯಾದರೂ. ಈ ಕಾಲಕ್ಕೆ ಅಲ್ಪಸ್ವಲ್ಪ ಬದಲಾವಣೆಗಳೂ ರೂಢಿಗೆ ಬಂದಿದ್ದುವು. ಇದೇ ಮೂಲ ವಿನ್ಯಾಸವೇ ಮತ್ತಷ್ಟು ಬದಲಾವಣೆಗಳೊಡನೆ ಮಧ್ಯರಾಜ್ಯ ಕಾಲದ (ಕ್ರಿ.ಪೂ. 2000-1200) ಗುಹಾವಾಸ್ತು ಕೃತಿಗಳಲ್ಲೂ ಕಂಡುಬರುತ್ತದೆ. ಆದರೆ ಈ ಕಾಲದಲ್ಲಿ ಬರಿಯ ಸುರಂಗದ ಬದಲು, ಕಂಬಗಳ ಸಾಲುಗಳನ್ನೂ ಅನೇಕ ಸಣ್ಣ ಕೋಣೆಗಳನ್ನೂ ಅಳವಡಿಸುವ ಪದ್ಧತಿ ಸಾಮಾನ್ಯವಾಗಿತ್ತಲ್ಲದೆ ಈ ಸಮಾಧಿಗಳು ಗಾತ್ರದಲ್ಲೂ ದೊಡ್ಡವಾಗಿರುತ್ತಿದ್ದವು. ಮಧ್ಯ ರಾಜ್ಯ ಕಾಲದ ಅನೇಕ ಗುಹಾ ಸಮಾಧಿಗಳು, ಬೇನೀ ಹಸನ್ ದೀರ್ ಎಲ್ ಗೆಹ್ರವಿ, ಆಸ್ಯೂತ್ ಮುಂತಾದೆಡೆಗಳಲ್ಲಿವೆ. ಬೇನೀ ಹಸನ್‍ನಲ್ಲಿ ಪಖ್ತ್ ದೇವತೆಗಾಗಿ ಮಾಡಿದ ಒಂದು ಗುಹಾ ದೇವಾಲಯವೂ ಇದೆ. ಈ ಕಾಲದ ಸಮಾಧಿಗಳು ಮತ್ತು ದೇವಾಲಯಗಳಲ್ಲಿ ವರ್ಣಚಿತ್ರಾಲಂಕರಣ ಮತ್ತು ಶಿಲ್ಪಾಲಂಕರಣ ವಿಶೇಷವಾಗಿ ಕಂಡುಬರುತ್ತದೆ. 

	ಬಿಬನ್ ಎಲ್ ಮುಲುಕ್‍ನಲ್ಲಿರುವ 1ನೆಯ ಸೆಟಿ ದೊರೆಯ ಕಾಲದ ಸಮಾಧಿ (ಕ್ರಿ.ಪೂ.ಸು. 1250), ಬೇನೀ ಹಸನ್ ಮತ್ತು ದೀರ್ ಎಲ್ ಬಹರಿಗಳಲ್ಲಿರುವ ಈ ಕಾಲದ ಸಮಾಧಿಗಳು ಉತ್ತಮ ಶಿಲ್ಪಕ್ಕೆ ಪ್ರಸಿದ್ಧವಾಗಿವೆ. ಇವುಗಳಲ್ಲಿ ತತ್ಕಾಲೀನ ದೇವರುಗಳು, ಧಾರ್ಮಿಕ ದೃಶ್ಯಗಳೇ ಅಲ್ಲದೆ, ಮೃತರ ಮತ್ತು ಅವರ ಸಂಬಂಧಿಕರ ಮೂರ್ತಿಗಳು, ಆ ವ್ಯಕ್ತಿಗಳ ಸ್ವಂತ ಸಾಧನೆಗಳು ಮುಂತಾದುವೆಲ್ಲ ಶಿಲ್ಪಿತವಾಗಿವೆ. ಇಲ್ಲಿಯ ಕೆಲವು ಶಿಲ್ಪಗಳ ಜೊತೆಯಲ್ಲಿ ಶಿಲಾಶಾಸನಗಳೂ ಇವೆ; ಚರಿತ್ರೆಯ ಪುನರ್ರಚನೆಗೆ ಬಹು ಉಪಯುಕ್ತವಾಗಿವೆ. 

	ಇದೇ ವಾಸ್ತುಶಿಲ್ಪ ಸಂಪ್ರದಾಯ ನವಪ್ರಭುತ್ವ ಕಾಲದಲ್ಲೂ (ಕ್ರಿ.ಪೂ.ಸು. 1200-1000) ಮುಂದುವರಿಯಿತು. ಶಿಲ್ಪದ ದೃಷ್ಟಿಯಿಂದ, 18ನೆಯ ರಾಜವಂಶದ ಅರಸರ ದಿಗ್ವಿಜಯಗಳನ್ನು ರೂಪಿಸಿರುವ ದೀರ್ ಎಲ್ ಬಹರಿಯಲ್ಲಿರುವ ರಾಣಿ ಹ್ಯಾಟ್ಸೆಪ್ಸೂಟಳ ಸಮಾಧಿ ಬಹಳ ಮುಖ್ಯವಾದ್ದು. ಆದರೆ ಇದು ಭಾಗಶಃ ಗುಹೆ, ಮುಂಭಾಗವೆಲ್ಲ ಕಟ್ಟಡ. ಈಜಿಪ್ಟಿನ ಗುಹಾ ವಾಸ್ತು ಸಂಪ್ರದಾಯದ ಮೇರುಕೃತಿ ಅಬು ಸೆಂಬೆಲ್‍ನಲ್ಲಿರುವ 2ನೆಯ ರ್ಯಾಮ್ಸೆಸ್ ದೊರೆಯ ದೇವಾಲಯ. ಇದು ಗುಹಾ ದೇವಾಲಯಗಳಲ್ಲಿ ಅತಿ ದೊಡ್ಡದು. ಅಲ್ಲದೆ, ಮುಂಭಾಗದಲ್ಲಿ ಬೃಹದಾಕಾರದ ರಾಜ ಮೂರ್ತಿಗಳಿಂದಲೂ, ಒಳಗೆ ಕಲಾತ್ಮಕವೂ ಚರಿತ್ರೆಯ ದೃಷ್ಟಿಯಿಂದ ಅಮೂಲ್ಯವೂ ಆದ ಶಿಲ್ಪಗಳಿಂದಲೂ ಅಲಂಕೃತವಾಗಿದೆ. (ನೋಡಿ- ಅಬು-ಸಿಂಬೆಲ್) ಈ ಮುಖ್ಯ ಕೃತಿಗಳಲ್ಲದೆ, ಗೆಬೆಲ್ ಸಿಲ್‍ಸಿಲೇಯ ಗುಹಾ ದೇವಾಲಯಗಳೂ ಥೀಬ್ಸ್ ಪ್ರದೇಶದಲ್ಲಿರುವ, ಮುನ್ನೂರಕ್ಕೂ ಹೆಚ್ಚು ರಾಜ್ಯಾಧಿಕಾರಿಗಳ, ಸಮಾಧಿಗಳೂ ಇದೇ ಕಾಲಕ್ಕೆ ಸೇರಿದವು. 

	ಈಜಿಪ್ಟಿನ ನವಪ್ರಭುತ್ವದ ಅವನತಿಯ ಅನಂತರ ಆ ದೇಶದ ಆಳ್ವಿಕೆ ಪರದೇಶದವರ ಕೈಸೇರಿದ್ದರಿಂದ ಗುಹಾ ವಾಸ್ತು ಸಂಪ್ರದಾಯ ಕೆಲಕಾಲ ಕಡಿದು ಹೋಯಿತು. ಆದರೆ ಪುನ: ಅಲ್ಲಿಯ 26ನೆಯ ರಾಜವಂಶದ ಕಾಲದಲ್ಲಿ (ಕ್ರಿ. ಪೂ. 663-525) ಥೀಬ್ಸ್ ಪ್ರದೇಶದಲ್ಲಿ ಕೆಲವು ಗುಹಾ ಸಮಾಧಿಗಳನ್ನು ಕೊರೆಯಲಾಯಿತು. ಆದರೆ ಇವು ಚಿಕ್ಕವೂ ಅನುಕರಣೆಗಳೂ ಆಗಿದ್ದು, ಈಜಿಪ್ಟನ ಗುಹಾ ವಾಸ್ತು ಸಂಪ್ರದಾಯದ ಅವನತಿಯನ್ನು ಸೂಚಿಸುತ್ತವೆ. 
ಮೆಡಿಟರೇನಿಯನ್ ಪ್ರದೇಶ ಮತ್ತು ಪಶ್ಚಿಮ ಏಷ್ಯ : ಮೆಡಿಟರೇನಿಯನ್ ಸಮುದ್ರದ ದ್ವೀಪಗಳಲ್ಲು ಸುತ್ತಲಿನ ಪ್ರದೇಶಗಳಲ್ಲೂ ಈಜಿಪ್ಟಿನಲ್ಲಿದ್ದಂಥ, ಮರಣೋತ್ತರ ಸ್ಥಿತಿಯನ್ನು ಕುರಿತ, ನಂಬಿಕೆಗಳು ಅಲ್ಪಸಲ್ಪ ವ್ಯತ್ಯಾಸದೊಡನೆ ಹರಡಿದ್ದಂತೆ ಕಾಣುತ್ತದೆ. ಇವು ಗುಹಾ ವಾಸ್ತುವಿನ ಬೆಳೆವಣಿಗೆಗೆ ಸಹಕಾರಿಯಾಗಿದ್ದರೂ ಪ್ರಾಯಶಃ ಅಲ್ಲಿಯ ಭೌಗೋಳಿಕ ಪರಿಸ್ಥಿತಿಯಿಂದಾಗಿ ಉತ್ತಮ ಗುಹಾ ವಾಸ್ತುಕೃತಿಗಳೇನೂ ಕಂಡುಬರುವುದಿಲ್ಲ. ಕ್ರೀಟ್ ದ್ವೀಪದಲ್ಲಿ ಕ್ರಿ. ಪೂ. 1700-1400ರ ಕಾಲದಲ್ಲಿ ನೆಲದ ಮಟ್ಟಕ್ಕಿಂತ ಕೆಳಗೆ ಬಂಡೆಗಳಲ್ಲಿ ದುಂಡು ಕೋಣೆಗಳನ್ನು ಕೊರೆದು ಅವಕ್ಕೆ ನೇರವಾದ ತೆರೆದ ಹಾದಿಯನ್ನು ರೂಪಿಸಿ ಸಮಾಧಿಗಳನ್ನು ನಿರ್ಮಿಸುವ ರೂಢಿ ಬೆಳೆಯಿತು. ಇವನ್ನು ಥೋಲೋಸ್ ಸಮಾಧಿಗಳೆಂದು ಕರೆಯುತ್ತಾರೆ. ಇವು ಭಾಗಶಃ ಶಿಲೆಯಲ್ಲಿ ಕಂಡರಿಸಿದ ಕೃತಿಗಳಾಗಿದ್ದರೂ, ಗುಹಾ ವಾಸ್ತುವೆಂದೆಸಿನಿಕೊಳ್ಳುವುದಿಲ್ಲ. ಆದರೆ ಇದೇ ಸಂಪ್ರದಾಯದ ವ್ಯತ್ಯಸ್ತ ರೂಪದಲ್ಲಿ ನಾಸಸ್‍ನಲ್ಲಿ ಪ್ರಸಿದ್ಧ ಅರಮನೆಯ ದಕ್ಷಿಣದಲ್ಲಿ ಒಂದು ರಾಜಸಮಾಧಿಯಿದೆ. ಇದರಲ್ಲಿ ಗೋರಿ ಕೋಣೆ ಮಾತ್ರ ಪೂರ್ಣವಾಗಿ ಗುಹಾರೂಪದ್ದು. ಇತರ ಭಾಗಗಳು ಶಿಲೆಯಲ್ಲಿ ಕೊರೆದವಾದರೂ ಅಲ್ಲಿ ಜೊತೆಗೆ ಗೋಡೆ ಮತ್ತು ಚಾವಣಿಗಳನ್ನು ರಚಿಸಲಾಗಿದೆ. ಥೋಲೋಸ್ ರೀತಿಯ ಸಮಾಧಿಗಳು ಕ್ರಿ. ಪೂ.ದ ಪ್ರಾರಂಭದವರೆಗೂ ಕ್ರೀಟ್‍ನಲ್ಲಿ ಬಳಕೆಯಲ್ಲಿದ್ದುವಲ್ಲದೆ ಇದೇ ರೀತಿಯವು ಗ್ರೀಸಿನಲ್ಲಿ ಸಹ ಮೈಸೀನಿಯನ್ ಸಂಸ್ಕøತಿಯ ಕಾಲದಲ್ಲಿ ಕಂಡುಬರುತ್ತವೆ. ಇಟಲಿಯ ಎಟ್ರೂರಿಯ ಪ್ರದೇಶದಲ್ಲೂ ಅನೇಕ ಭೂಗರ್ಭ ಸುಹಾಸಮಾಧಿಗಳಿವೆ. ಇವು ಕ್ರಿ.ಪೂ. ಸು.6ರಿಂದ 3ನೆಯ ಶತಮಾನಕ್ಕೆ ಸೇರಿದವು. ಇವು ವಿನ್ಯಾಸದಲ್ಲಿ ಸಮಕಾಲೀನ ವಾಸ್ತುವನ್ನೇ ಅನುಕರಿಸುತ್ತವೆ. ಇವುಗಳ ಒಳಗೆ ಉತ್ತಮ ವರ್ಣಗಳಿದ್ದುವಲ್ಲದೆ, ಮೃತನ ಉಪಯೋಗಕಾಗಿ ಅವಶ್ಯಕ ವ್ಯವಸ್ಥೆಗಳನ್ನೂ ಮಾಡಲಾಗಿರುತ್ತಿತ್ತು. 
ಇಟಲಿಯ ರೋಂ ಮತ್ತು ಸುತ್ತಣ ಪ್ರದೇಶದಲ್ಲಿ ಅನೇಕ ಸುರಂಗ ಸಮಾಧಿಗಳು ಇವೆ. ಭೂಗರ್ಭದಲ್ಲಿ ಮೈಲಿಗಟ್ಟಲೆ ಅಂಕುಡೊಂಕಾಗಿ ಅರಡುವ ಸುರಂಗಗಳನ್ನು ತೋಡಿ, ಅವುಗಳ ಪಕ್ಕದಲ್ಲಿ ಗೋಡೆಗಳಲ್ಲಿ ಸಣ್ಣ ಕೋಷ್ಠಗಳನ್ನು ನಿರ್ಮಿಸಿ, ಶವ ಅಥವಾ ಶವಾವಶೇಷಗಳನ್ನು ಸಂಸ್ಕರಿಸಲಾಗುತ್ತಿತ್ತು. ಇಂಥ ಸುರಂಗ ಸಮಾಧಿಗಳು ಒಂದು ಕುಟುಂಬ ಅಥವಾ ಜನಾಂಗಕ್ಕೆ ಮೀಸಲಾಗಿರುತ್ತಿದ್ದವು. ಬಂಡೆಯಲ್ಲಿ ಕೊರೆದ ಈ ಸುರಂಗಗಳಲ್ಲಿ ಹೆಚ್ಚಿನ ವಾಸ್ತು ಅಂಶಗಳಾಗಲಿ ಶಿಲ್ಪಾಲಂಕರಣವಾಗಲಿ ಕಂಡುಬರುವುದಿಲ್ಲ. ಈ ರೀತಿಯ ಸುರಂಗ ಸಮಾಧಿಗಳು ಮೆಡಿಟರೇನಿಯನ್ ಸಮುದ್ರದ ಆಗ್ನೇಯ ದಂಡೆಯ ಫಿನೀಷಿಯ ಮತ್ತು ಸುತ್ತಣ ಪ್ರದೇಶಗಳಲ್ಲಿ ಕ್ರಿ. ಪೂ. 1ನೆಯ ಸಹಸ್ರಮಾನದಲ್ಲೆ ಪ್ರಚಲಿತವಾಗಿದ್ದ ಗುಹಾಸಮಾಧಿಗಳಿಂದ ರೂಢಿತವಾದಂತೆ ಕಾಣುತ್ತದೆ. ಈ ಕಾಲದ ಹಲವು ಗುಹಾಸಮಾಧಿಗಳು ಇಸ್ರೇಲಿನ ಬೆತ್‍ಶಿಯರಿಂ ಎಂಬಲ್ಲಿ ಕಂಡುಬಂದಿವೆ. ಬೆಟ್ಟದ ಇಳಿಜಾರಿನಲ್ಲಿ ತೋಡಲಾದ ಈ ಸುರಂಗ ಸಮಾಧಿಗಳಲ್ಲಿ ಸಾಮಾನ್ಯವಾಗಿ ಒಂದೇ ಒಂದು ನೇರ ಸುರಂಗದಂಥ ಗುಹೆಯಿದ್ದು ಅದರ ಪಕ್ಕದ ಗೋಡೆಗಳಲ್ಲಿ ಶವಗೂಡುಗಳಿರುತ್ತವೆ. ಇಸ್ರೇಲಿನ ಫಿನೀಷಿಯ ಕರಾವಳಿಯಲ್ಲಿರುವ ಎಲ್‍ಜಿಬ್ ಎಂಬಲ್ಲಿ ಕ್ರಿ.ಪೂ. 8ನೆಯ ಶತಮಾನದ ಗುಹಾ ಸಮಾಧಿಗಳೂ ಜಾರ್ಡನ್ ನಧೀ ಕಣಿವೆಯ ಹಜೋರ್ ಎಂಬಲ್ಲಿ ಭೂಗರ್ಭ ಸುರಂಗ ಸಮಾಧಿಗಳು ಹಾಗೂ ಗುಹಾ ಸಮಾಧಿಗಳೂ ಬೆಳಕಿಗೆ ಬಂದಿವೆ. ಹಜೋರ್‍ನ ಸುರಂಗ ಸಮಾಧಿಗಳು ಕ್ರಿ. ಪೂ. 1500ರ ಸುಮಾರಿನವೆಂದು ಊಹಿಸಲಾಗಿದೆ. ಇದರ ಮುಂಭಾಗದಲ್ಲಿ ಎರಡು ಕಂಬಗಳಲ್ಲದೆ ಒಳಗೆ ವಿಶಾಲವಾದ ಹಜಾರವಿದೆ. ಇದು ಕ್ರಿ. ಪೂ. 9ನೆಯ ಶತಮಾನದ್ದು. 

	ಮೆಡಿಟರೇನಿಯನ್ ಸಮುದ್ರಕ್ಕೆ ಹೊಂದಿಕೊಂಡಂತಿರುವ ತುರ್ಕಿ ದೇಶದ ಪಶ್ಚಿಮ ಭಾಗದಲ್ಲೂ (ಏಷ್ಯ ಮೈನರ್) ಗುಹಾ ವಾಸ್ತು ಶಿಲ್ಪಕೃತಿಗಳಿವೆ. ಇಲ್ಲಿಯ ಫ್ರಿಜಿಯ ಪ್ರದೇಶದ ಎಸ್ಕಿಷೆಹಿರ್, ಅಘ್ಯೋನ್, ಕರಹಿಸಾರ್, ಅಸ್ರ್ಲನ್ ಕಾಯ, ಯಾಜಿಲಿಕಾಯ ಮುಂತಾದೆಡೆಗಳಲ್ಲಿರುವ ಕೃತಿಗಳು ಪ್ರಸಿದ್ಧವಾದವು. ಇಲ್ಲಿಯ ಗುಹಾವಾಸ್ತುಕೃತಿಗಳು ಕ್ರಿ. ಪೂ. 6 -- ಕ್ರಿ.ಶ. 3ನೆಯ ಶತಮಾನ ಕಾಲಕ್ಕೆ ಸೇರಿದವು. 

	ಫ್ರಿಜಿಯದ ಕೃತಿಗಳಲ್ಲಿ ಸಮಾಧಿಗಳಲ್ಲದೆ ದೇವಾಲಯಗಳೂ ಇವೆ. ಇವೆಲ್ಲದರಲ್ಲೂ ಮುಮ್ಮುಖ ಮಾತ್ರವೇ ವಿಶಾಲವಾಗಿ ಸುಂದರವಾಗಿ ಕೊರೆಯಲಾಗಿದ್ದು ಒಳ ಆವರಣ ಕೇವಲ ಸಮಾಧಿ ಕೋಣೆ ಅಥವಾ ಚಿಕ್ಕ ದೇವಕೋಷ್ಠಕ್ಕೆ ಸೀಮಿತವಾಗಿರುತ್ತದೆ. ಫ್ರಿಜಿಯದ ಸಮಾಧಿಗಳು ಸ್ವರೂಪದಲ್ಲಿ ಲಿಸಿಯ ಪ್ರದೇಶದ ಮರದ ಕಟ್ಟಡಗಳನ್ನು ಅನುಕರಿಸುತ್ತವೆಯೆಂದು ವಿದ್ವಾಂಸರ ಅಭಿಪ್ರಾಯ. ಇವುಗಳಲ್ಲಿ 1 ಮಟ್ಟ ಚಾವಣಿಯವು, 2 ಇಪ್ಪಾರು ಚಾವಣಿಯವು ಮತ್ತು 3 ಗ್ರೀಕ್ ಸ್ತಂಭರೀತಿಗಳನ್ನು ಉಪಯೋಗಿಸಿರುವವು ಎಂದು ಮೂರು ಬಗೆಗಳಿದ್ದು ಈ ಬಗೆಗಳು ಕಾಲಾನುಕ್ರಮವಾಗಿ ಮೇಲೆ ಸೂಚಿಸಿರುವ ಕ್ರಮದಲ್ಲೇ ಬಳಕೆಗೆ ಬಂದಂತೆ ತೋರುತ್ತದೆ. ಹೆಚ್ಚಿನವು ಎರಡನೆಯ ಬಗೆಗೆ ಸೇರಿದವು. ಬುಯುಕ್ ಅಸ್ರ್ಲನ್ ತಾಷ್ ಮತ್ತು ದಿಲಿಕಿ ತಾಷ್ ನ ಸಮಾಧಿಗಳು ಮೊದಲನೆಯ ಬಗೆಗೆ ಉದಾಹರಣೆಗಳು ಅಲ್ಲದೆ ಇವು ಅತ್ಯಂತ ಪ್ರಾಚೀನವಾದವು ಸಹ. ಯಾಜಿಲಿಕಾಯದ ಸಮಾಧಿ ಎರಡನೆಯ ಬಗೆಯದು. ಕಲೆಕಪಿ (ಕ್ರಿ. ಪೂ. 5ನೆಯ ಶತಮಾನ) ಮತ್ತು ಕಸ್ತಮೊನು (ಕ್ರಿ. ಪೂ. 4ನೆಯ ಶತಮಾನ) ಮೂರನೆಯ ವರ್ಗದ ಮೊದಲ ಕೃತಿಗಳು. ಇದೇ ಪ್ರದೇಶದಲ್ಲಿರುವ ಸೋಲನ್ ಎಂಬವನ ಸಮಾಧಿ ರೋಮನ್ ಸಾಮ್ರಾಜ್ಯ ಕಾಲಕ್ಕೆ ಸೇರಿದ್ದು, ಇದನ್ನು ಮೂರನೆಯ ಬಗೆಯಲ್ಲಿ ಸುಮಾರು ಕೊನೆಯ ಕೃತಿಯೆಂದು ಪರಿಗಣಿಸಬಹುದು. ಫ್ರಿಜಿಯದ ಸಮಾಧಿಗಳ ಮುಮ್ಮುಖ ಅಲಂಕರಣದಲ್ಲಿ ಗ್ರೀಕ್ ಅಲ್ಲದೆ ಅಖಮೇನಿಯನ್ ಮತ್ತು ಹಿಟ್ಟೈಟ್ ಶಿಲ್ಪ ಸಂಪ್ರದಾಯದ ಪ್ರಭಾವವೂ ಕಂಡುಬರುತ್ತದೆ. 

	ಇಲ್ಲಿಯ ದೇಮಾಗಾರಗಳೂ ಸಮಾಧಿಗಳಂತೆಯೇ ಕಾಣುತ್ತವೆ. ಆದರೆ ಇಲ್ಲಿ ಸಮಾಧಿ ಕೋಣೆಯ ಬದಲು ವಿಗ್ರಹ ಅಥವಾ ಪವಿತ್ರ ವಸ್ತುವನ್ನಿಡುವ ಕೋಷ್ಠವಿರುತ್ತದೆ. ಈ ದೇವಾಗಾರಗಳಲ್ಲಿ ಬಹಳ ಮುಖ್ಯವಾದವು ಆಸ್ರ್ಟನ್ ಕಾಯ (ಕ್ರಿ.ಪೂ. 6ನೆಯ ಶತಮಾನ), ಯಾಜಿಲಿಕಾಯ, ಬಹ್ಷಿಸ್ (ಕ್ರಿ. ಪೂ. 5ನೆಯ ಶತಮಾನ)-ಈ ಸ್ಥಳಗಳಲ್ಲಿವೆ. ಇಂಥ ದೇವಾಗಾರಗಳು ಕ್ರಿ. ಪೂ. 6-5ನೆಯ ಶತಮಾನಗಳಲ್ಲಷ್ಟೇ ಪ್ರಚಲಿತವಾಗಿದ್ದುವು. ಅರೆಜಸ್ಟಿಸ್ ಎಂಬಲ್ಲಿಯ ದೇವಾಲಯದಲ್ಲಿ ಸಿಬೆಲೀ ದೇವತೆಯ ಒಂದು ಸುಂದರ ಮೂರ್ತಿಯಿದೆ. ಇವಲ್ಲದೆ ಬಂಡೆಯಲ್ಲಿ ಮೆಟ್ಟಲುಗಳನ್ನು ಕಡಿದು ಮೇಲೆ ಸಿಂಹಾಸನದಂತೆ ವೇದಿಕೆಯನ್ನು ನಿರ್ಮಿಸಿರುವ ತೆರೆದ ದೇವಾಗಾರಗಳೂ ಫ್ರಿಜಿಯ ಪ್ರದೇಶದಲ್ಲಿದ್ದವು. ಇಂಥ ಒಂದು ಉತ್ತಮ ವಾಸ್ತುಕೃತಿ ಮೈದಾಸ್ ನಗರದಲ್ಲಿ ಇದೆ. ಇದು ಹಿಂದೆ ಸಿಬೆಲೀ ದೇವತೆಗಾಗಿ ಮೀಸಲಾಗಿತ್ತು. 

	ಫ್ರಿಜಿಯದ ಪಕ್ಕದ ಲಿಸಿಯ ಮತ್ತು ಕಾರಿಯ ಪ್ರದೇಶಗಳಲ್ಲಿ ಸಹ ಬಂಡೆಯಲ್ಲಿ ಕೊರೆದ ಕೆಲವು ಕೃತಿಗಳಿವೆ. ಆದರೆ ಇವು ರಚನಾಕೃತಿಗಳಂತೆಯೇ ಹೊರಮೈಯನ್ನೂ ಪೂರ್ಣವಾಗಿ ಕೊರೆದು ಮಾಡಿದವಾದ್ದರಿಂದ ಗುಹೆಗಳೆನಿಸಿಕೊಳ್ಳುವುದಿಲ್ಲ. ಇವೆಲ್ಲ ಸಮಾಧಿಗಳು. ಲಿಸಿಯದ ಇಂಥ ಮತ್ತು ಕಾರಿಯದ ಇದಿಮಗಳಲ್ಲಿ ಈ ವಾಸ್ತುರೀತಿಯ ಒಳ್ಳೆಯ ಉದಾಹರಣೆಗಳಿವೆ. 

	ಸಿರಿಯದ ಉತ್ತರ ಗಡಿಯಲ್ಲಿರುವ ಅಸ್ರ್ಲನ್ ತಾಷ್‍ನಲ್ಲೂ ಫ್ರಿಜಿಯದ ರೀತಿಯ ಒಂದು ಸಮಾಧಿಯಿದೆ. ಪಶ್ಚಿಮ ಏಷ್ಯದ ಇರಾಕ್ ಪ್ರದೇಶದ ಶಿರಿ ಮಲಿಕ್ತದಲ್ಲಿ ಅಸ್ಸೀರಿಯನ್ ದೊರೆಯೊಬ ದೇವ ಚಿಹ್ನೆಗಳೆದುರು ಪ್ರಾರ್ಥಿಸುತ್ತಿರುವ ಮತ್ತು ಮಲ್ತಾಯ್ ಎಂಬಲ್ಲಿ ಸೆನ್ನಾ ಚೆರಿಬ್ ದೊರೆ ಇದೇ ರೀತಿ ಪ್ರಾರ್ಥನೆ ಸಲ್ಲಿಸುತ್ತಿರುವ ಶಿಲ್ಪಗಳು ಮತ್ತು ಅಲ್ಲಿಯ ಕುರ್ದಿಸ್ತಾನ ಪ್ರದೇಶದಲ್ಲಿರುವ, ಕ್ರಿ. ಪೂ. 6ನೆಯ ಶತಮಾನದ ಒಂದೆರಡು ಗುಹಾ ಸಮಾಧಿಗಳು - ಇವನ್ನು ಬಿಟ್ಟರೆ ಆ ದೇಶದಲ್ಲಿ ಹೆಚ್ಚಿನ ಗುಹಾ ವಾಸ್ತು ಶಲ್ಪಗಳಿಲ್ಲ. ಜಾರ್ಡನಿನ ಪೆಟ್ರ ಮತ್ತು ಅರೇಬಿಯದ ಹೆಜ್ರಾಘಳಲ್ಲಿ ಕೇವಲ ಒಂದು ಹಜಾರ ಮಾತ್ರ ಇರುವ ಗುಹಾದೇವಾಲಯಗಳಿವೆ. ಇವು ಇಸ್ಲಾಂ ಧರ್ಮಕ್ಕೆ ಹಿಂದಿದ್ದ ಸ್ಥಳೀಯ ಅರಬ್ಬಿ ಧರ್ಮಪಂಥಿಗಳ ದೇವಾಲಯಗಳೆಂದೂ ಪ್ರಾಯಶಃ ಕ್ರಿ. ಪೂ. 2-1ನೆಯ ಶತಮಾನದವೆಂದೂ ಊಹಿಸಲಾಗಿದೆ. ಇರಾನ್ ದೇಶದ ಅಜûರ್ ಬೈಜಾನ್ ಪ್ರಾಂತ್ಯ ಫಖ್ರಕ, ಕರ್ದಿಸ್ತಾನ್ ವಿಭಾಗದಲ್ಲಿರುವ ದುಕ್ಕಾನ್-ಇ-ದಾವೂದ್, ಕೆರ್ಮನ್ ಷಾ ಪ್ರದೇಶದಲ್ಲಿರುವ ಸಖ್ನ-ಇಲ್ಲಿ ಮಿಡಿಯ ರಾಜ್ಯದ ಕಾಲದ (ಕ್ರಿ. ಪೂ. 7-6ನೆಯ ಶತಮಾನ) ಗುಹಾಸಮಾಧಿಗಳಿವೆ. ಫಖ್ರಕದ ಗುಹೆಯಲ್ಲಿ ಮುಂಭಾಗದಲ್ಲಿ ಎರಡು ಕಂಬಗಳಿಂದೆತ್ತಿದ ವರಾಹವೂ ಅದರ ಹಿಂದೆ ಮೂರು ಕಂಬಗಳಿರುವ ಸಮಾಧಿ ಕೋಣೆಯೂ ಇದ್ದು ಇದರಲ್ಲಿ ಮೂರು ಸಮಾಧಿಗಳಿವೆ. ದುಕ್ಕಾನ್-ಇದಾವೂದ್ ಮತ್ತು ಸಖ್ನದ ಗುಹೆಗಳು ಕೂಡ ವಿನ್ಯಾಸದಲ್ಲಿ ಸ್ಥೂಲವಾಗಿ ಮೇಲಿನ ರೀತಿಯವೆ. ದುಕ್ಕಾನ್-ಇ-ದಾವೂದ್, ಕೀಲ್-ಇ-ದಾವೂದ್ ಎಂದು ಕರೆಯುವ ಧಾರ್ಮಿಕ ಶಿಲ್ಪಗಳಿರುವ ಭಿತ್ತಿ, ಸಖ್ನದ ಗುಹೆಯ ಮೇಲಿರುವ ಅಹುರ್‍ಮಜ್ದನ ಚಿಹ್ನೆ ಇವು ಉತ್ತಮ ಶಿಲ್ಪಗಳೆಂದು ಪರಿಗಣಿತವಾಗಿವೆ.

	ಪರ್ಷಿಯನ್ ಸಾಮ್ರಾಜ್ಯ ಕಾಲಕ್ಕೆ ಸೇರಿದ ಬಹುಮುಖ್ಯವಾದ ಗುಹಾ ವಾಸ್ತು ಕೃತಿಗಳು ಇರಾನಿನ ಪರ್ಸೆಪೊಲಿಸ್ ಬಳಿ ಇವೆ. ಇವುಗಳಲ್ಲಿ ಅತ್ಯಂತ ಹಳೆಯವು ನಕ್ಷೆ-ಇ-ರಸ್ತುಂ ಎಂಬಲ್ಲಿವೆ. ಇವು ಒಂದನೆಯ ಡೇರಿಯಸ್ (ಕ್ರಿ.ಪೂ. 521-485), ಒಂದನೆಯ ಕ್ಸೆಕ್ರ್ಸಸ್ (ಕ್ರಿ.ಪೂ. 485-465), ಒಂದನೆಯ ಅರ್ತಾಕ್ಸೆಕ್ರ್ಸಸ್ (ಕ್ರಿ. ಪೂ. 465-424) ಮತ್ತು ಎರಡನೆಯ ಡೇರಿಯಸ್ (ಕ್ರಿ. ಪೂ. 424-405) ದೊರೆಗಳ ಸಮಾಧಿಗಳು. ಈ ಸಮಾಧಿಗಳಲ್ಲಿ ಶಿಲುಬೆಯಾಕಾರದಲ್ಲಿ ಕೊರೆದ ವಿಶಾಲವಾದ ಮುಮ್ಮುಖವಿದ್ದು ಮುಂದಿನ ಅಡ್ಡಪಟ್ಟಿಯಲ್ಲಿ ಪರ್ಸೆಪೊಲಿಸ್ ರೀತಿಯವೆಂದು ಕರೆಯುವ ನಾಲ್ಕು ಕಂಬಗಳಿಂದ ಎತ್ತಿದ ವರಾಂಡವೂ ಅವರ ಹಿಂದೆ ಸಮಾಧಿಕೋಣೆಯೂ ಇರುತ್ತವೆ. ಒಂದನೆಯ ಡೇರಿಯಸನ ಸಮಾಧಿಯ ಮೇಲೆ ಅಹುರ್‍ಮಜ್ದ ದೇವತೆಯ ಚಿಹ್ನೆಯೂ ರಾಜನ ಸಿಂಹಾಸನವೂ ಸದೆಬಡಿದ ರಾಷ್ಟ್ರಗಳಿಂದ ಎತ್ತಿಹಿಡಿಯಲ್ಪಟ್ಟಂತೆ ಶಿಲ್ಪಿಸಲ್ಪಟ್ಟಿವೆ. ಪರ್ಸೆಪೊಲಿಸ್ ಬಳಿಯಲ್ಲೇ ಕಹ್-ಇ-ರಹ್ಮತ್ ಬೆಟ್ಟದ ಬುಡದಲ್ಲಿ ಮುಂದಿನ ಪರ್ಷಿಯನ್ ಚಕ್ರಾಧಿಪತಿಗಳಾದ 2ನೆಯ ಅರ್ತಾಕ್ಸೆರ್ಕಸ್ (ಕ್ರಿ. ಪೂ. 404-359), ಮತ್ತು 3ನೆಯ ಅರ್ತಾಕ್ಸೆಕ್ರ್ಸಸ್‍ರ (ಕ್ರಿ. ಪೂ. 359-338) ಸಮಾಧಿಗಳಿವೆ. ಇವು ವಿನ್ಯಾಸದಲ್ಲಿ ನಕ್ಷ್-ಇ-ರುಸ್ತುಮ್ ಸಮಾಧಿಗಳನ್ನೇ ಹೋಲುತ್ತವೆ. ಇವುಗಳಲ್ಲಿ ಈ ದೊರೆಗಳು ಅಹರ್‍ಮಜ್ದ ದೇವತೆಯನ್ನು ಪೂಜಿಸುವ ಉತ್ತಮ ಉಬ್ಬುಶಿಲ್ಪಗಳಿವೆ. ಕ್ರಿ. ಶ. 4-5ನೆಯ ಶತಮಾನಕ್ಕೆ ಸೇರಿದ ಸಸ್ಸೌನೀಯ ಅರಸರ ಶಿಲ್ಪಗಳನ್ನೊಳಗೊಂಡ ಭಿತ್ತಿಗಳು ಮತ್ತು ಗುಹೆಗಳು ಇರಾನಿನ ತೌಖ್-ಇ-ಬುಸ್ಸನ್ ಎಂಬಲ್ಲಿವೆ.

	ಭಾರತದ ಪ್ರಭಾವ - ಈಜಿಪ್ಟ್, ಪಶ್ಚಿಯ ಏಷ್ಯ ಮತ್ತು ಮೆಡಿಟರೇನಿಯನ್ ಪ್ರದೇಶಗಳಲ್ಲಿ ಹರಡಿದ್ದ ಗುಹಾ ವಾಸ್ತು ಹೆಚ್ಚು ಮಟ್ಟಿಗೆ ಸಮಾಧಿವಾಸ್ತು ಎಂಬುದು ಮೇಲಿನ ಉದಾಹರಣೆಗಳಿಂದ ವ್ಯಕ್ತವಾಗುತ್ತದೆ. ಇವುಗಳಲ್ಲಿ ಕೆಲವು ದೇವಾಗಾರಗಳಾಗಿದ್ದರೂ ಅಂಥವುಗಳ ಸಂಖ್ಯೆ ಅತ್ಯಲ್ಪ. ಆದರೆ ಗುಹಾವಾಸ್ತುಪ್ರಕಾರ ಕ್ರಿ.ಪೂ. 3 ನೆಯ ಶತಮಾನದಲ್ಲಿ ಭಾರತದಲ್ಲಿ ಪ್ರಚಲಿತವಾದ ಮೇಲೆ ಅದರ ಸ್ವರೂಪ ಮತ್ತು ಉದ್ದಿಶ್ಯಗಳೇ ಬದಲಾಗುತ್ತವೆ. ಇದರ ಸಮಾಧಿಸಂಬಂಧ ಕ್ಷೀಣವಾಗಿ ಗುಹಾವಾಸ್ತುವಿನಲ್ಲಿ ಸ್ಥಳೀಯ ರಚನಾ ವಾಸ್ತುಸ್ವರೂಪವನ್ನು ಅಳವಡಿಸಿಕೊಂಡು ಈ ಕೃತಿಗಳು ಹೆಚ್ಚಾಗಿ ದೇವಾಗಾರಗಳಾಗಿಯೋ, ಭಿಕ್ಷು-ಸಂನ್ಯಾಸಿಗಳ ವಾಸಸ್ಥಾನಗಳಾಗಿಯೋ ವಿಜೃಂಭಿಸುತ್ತವೆ. ಈ ಹೊಸ ಸ್ವರೂಪದ ಗುಹಾ ವಾಸ್ತುಶಿಲ್ಪ ಭಾರತೀಯ ಸಂಸ್ಕøತಿಯ, ಅದರಲ್ಲೂ ಬೌದ್ಧ ಧರ್ಮದ ಪ್ರಭಾವಕ್ಕೆ ಒಳಗಾದ ಹಲವು ದೇಶಗಳಲ್ಲಿ ಹರಡಿತು.

	ಆಫ್ಘಾನಿಸ್ತಾನ : ಆಫ್ಘಾನಿಸ್ತಾನದಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ಬೌದ್ಧ ಗುಹಾ ವಾಸ್ತು ಶಿಲ್ಪದ ಅವಶೇಷಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ದರುಂತ, ಕುಂದುಜ್, ಹೈಬಕ್ ಮತ್ತು ಬಾಮಿಯಾನ್ ಮುಖ್ಯವಾದವು. ದುರಂತದಲ್ಲಿ ಹಲವು ಬೌದ್ಧ ಸಂಘಾರಾಮಗಳನ್ನು ಬೆಟ್ಟದ ತಪ್ಪಲಿನಲ್ಲಿ ಕಡಿಯಲಾಗಿದೆಯಲ್ಲದೆ ಇಲ್ಲಿ ಕೆಲವು ಸ್ತೂಪಗಳೂ ಇವೆ. ಕುಂದುeóïನಲ್ಲಿಯೂ ಒಂದು ವಿಶಾಲವಾದ ವಿಹಾರವಿದೆ. ಇಲ್ಲಿ ಭಿಕ್ಷುಗಳು ವಾಸಿಸುವ ಕೋಣೆಗಳು ಚಚ್ಚೌಕವಾಗಿದ್ದರೂ ಚಾವಣಿ ಮಾತ್ರ ಗುಮ್ಮಟಾಕಾರದಲ್ಲಿರುವುದು ವಿಶೇಷ. ಬೆಟ್ಟದಲ್ಲಿ ಕಡಿದ ಸುಮಾರು 73' ವ್ಯಾಸದ ಸ್ತೂಪವೊಂದು ಹೈಬಕ್‍ನಲ್ಲಿ ಇದೆ. ಇದರ ಬಳಿಯೇ ಅರ್ಧ ಕೆತ್ತಿ ಬಿಟ್ಟಿರುವ ಇನ್ನೊಂದು ವಿಶಾಲವಾದ ವಿಹಾರವೂ ಸಮೀಪದಲ್ಲಿ ಕೆಲವು ಚೈತ್ಯಾಗಾರಗಳೂ ಇವೆ. ಇಲ್ಲಿಯ ಇನ್ನೊಂದು ಗುಹೆಯಲ್ಲಿ ಬೌದ್ಧಭಿಕ್ಷುಗಳ ವಾಸಕ್ಕಾಗಿ ಮಾಡಿದ ವಿಹಾರದಲ್ಲಿ ದೊಡ್ಡ ಹಜಾರವೂ ಸುತ್ತಲೂ ಕೋಣೆಗಳೂ ಅಲ್ಲದೆ ಒಳಗೆ ಬುದ್ಧ ಮೂರ್ತಿಯುಳ್ಳ ಒಂದು ಗರ್ಭಗುಡಿಯೂ ಇದೆ. ಇಲ್ಲಿಯ ಕಂಬಗಳು ಅರೆ ಐಯೋನಿಕ್ ಶೈಲಿಯಲ್ಲಿರುವುವಲ್ಲದೆ ಗರ್ಭಗುಡಿಯ ಮೇಲಿನ ಚಾವಣಿ ಸಣ್ಣ ಅರೆಕಮಾನುಗಳ ಮೇಲೆತ್ತಿದ ಗುಮ್ಮಟದಂತಿದ್ದು ಈ ವಾಸ್ತುವಿನ್ಯಾಸದಲ್ಲಿ ಸಸ್ಸೌನೀಯ ಪ್ರಭಾವವನ್ನು ಕಾಣಬಹುದಾಗಿದೆ. ಈ ವಿಹಾರ ಕ್ರಿ.ಶ. 4-5ನೆಯ ಶತಮಾನದ್ದು. ಬಾಮಿಯಾನ್ ವಿಶ್ವಪ್ರಸಿದ್ಧವಾದ ಕಲಾಕೇಂದ್ರ. ಇಲ್ಲೂ ಹಲವು ಸಂಘಾರಾಮಗಳೂ ಶಿಲ್ಪಿತ ದೇವಾಲಯಗಳೂ ಇವೆ. ಆದರೆ ಕಡಿದಾದ ಬಂಡೆಯಲ್ಲಿ ಉಬ್ಬುಶಿಲ್ಪದಂತೆ ಕಡೆದಿರುವ ಎರಡು ಬೃಹತ್ ಬೌದ್ಧ ಮೂರ್ತಿಗಳು ಇಲ್ಲಿಯವುಗಳಲ್ಲಿ ಬಹುಮುಖ್ಯವಾದವು. ಇವು ವಿಶ್ವದಲ್ಲೇ ಅತಿ ಎತ್ತರದ ಪ್ರತಿಮೆಗಳೆಂದು ಪ್ರಸಿದ್ಧವಾಗಿದೆ. ದೊಡ್ಡ ಬುದ್ಧನ ಪ್ರತಿಮೆ 175' ಎತ್ತರವೂ ಚಿಕ್ಕದು 120' ಎತ್ತರವೂ ಇವೆ. ಶಿಲ್ಪನಿರೂಪಣೆಯಲ್ಲಿ ಗುಪ್ತ, ಸಸ್ಸೌನೀಯ ಮತ್ತು ಇರಾನೀ ಶಿಲ್ಪಗಳ ಪ್ರಭಾವ ಕಂಡುಬರುವುದರಿಂದ ಇವು 4-5ನೆಯ ಶತಮಾನದವುಗಳೆಂದು ಊಹಿಸಲಾಗಿದೆ. ಆಫ್ಘಾನಿಸ್ತಾನದ ಗುಹಾವಾಸ್ತುಶಿಲ್ಪದ ಅಧ್ಯಯನ ಅಷ್ಟೇನೂ ಚೆನ್ನಾಗಿ ನಡೆದಿಲ್ಲ. ಆದರೂ ಈಗ ಸಿಗುವ ಮಾಹಿತಿಗಳಿಂದ ಈ ಸಂಪ್ರದಾಯ ಕ್ರಿ. ಪೂ. 1 ರಿಂದ ಕ್ರಿ. ಶ. 5-6ನೆಯ ಶತಮಾನಗಳವರೆಗೂ ನಡೆದು ಬಂತು ಎಂದು ಹೇಳಬಹುದು.

	ಮಧ್ಯ ಏಷ್ಯ : ಮಧ್ಯ ಏಷ್ಯದ ಈಗಿನ ಖೋಟಾನ್ ಪ್ರದೇಶ ಹಿಂದೆ ಪ್ರಸಿದ್ಧವಾದ ರೇಷ್ಮೆ ಹಾದಿಯಲ್ಲಿತ್ತು. ಈ ಪ್ರದೇಶದಲ್ಲಿ ಅನೇಕ ಬೌದ್ಧ ಗುಹಾಲಯಗಳು ಕ್ರಿ. ಶ. 4-8ನೆಯ ಶತಮಾನಗಳ ಅವಧಿಯಲ್ಲಿ ಸ್ಥಳೀಯ ರಾಜರಿಂದ ನಿರ್ಮಿತವಾದುವು. ಕಿಜಿûಲ್ ಮತ್ತು ಕುಂತುರದ ಬೌದ್ಧಾಲಯಗಳು ಶಿಲ್ಪ ಮತ್ತು ಭಿತ್ತಿ ಚಿತ್ರಗಳಿಗೆ ಹೆಸರಾಗಿವೆ. ಇವೆಲ್ಲದರಲ್ಲಿಯೂ ಬೌದ್ಧ ಸಂಘಾರಾಮಗಳೂ ದೇವಾಲಯಗಳೂ ಇವೆ. ಮುಂದೆ ಒಂದು ಮೊಗಸಾಲೆ, ಹಿಂದೆ ಒಂದೋ ಎರಡೋ ಕೋಣೆಗಳುಳ್ಳ ದೇವಾಲಯಗಳು ಸಾಮಾನ್ಯ. ಇವಕ್ಕೆ ಅರಪೀಪಾಯಿಯ ಅಥವಾ ಗುಮ್ಮಟದ ಆಕಾರದ ಚಾವಣಿ ಇರುತ್ತದೆ. ಇಲ್ಲಿಯ ಶಿಲ್ಪದ ವಸ್ತು ಪೂರ್ಣವಾಗಿ ಭಾರತೀಯ ಮಹಾಯಾನ ಬೌದ್ಧ ಧರ್ಮಕ್ಕೆ ಸಂಭಂಧಿಸಿದ್ದಾದರೂ ನಿರೂಪಣೆಯಲ್ಲಿ ಇರಾನೀ, ಸಸ್ಸೌನೀ ಮತ್ತು ಚೀನೀ ಶೈಲಿಗಳ ಮಿಶ್ರಣ ಕಂಡು ಬರುತ್ತದೆ.

	ಚೀನ : ಚೀನ ದೇಶಕ್ಕೆ ಮಹಾಯಾನ ಬೌದ್ಧಪಂಥ ಪ್ರವೇಶಿಸಿದ ಕಾಲದಿಂದ ಅದಕ್ಕೆ ಪೋಷಣೆ ಮುಂದುವರಿದ ವರೆಗೂ ಅಲ್ಲಿ ಅಸಂಖ್ಯಾತ ಬೌದ್ಧ ಗುಹಾಲಯಗಳು ನಿರ್ಮಿತವಾದವು. ಗುಹಾಲಯಗಳ ಸಂಖ್ಯಾಬಾಹುಳ್ಯದಲ್ಲಿ ಚೀನ ಭಾರತವನ್ನು ಮೀರಿಸುತ್ತದೆ. ಆದರೆ ಭಾರತದಲ್ಲಿರುವಷ್ಟು ವೈವಿಧ್ಯ ಇಲ್ಲಿ ಕಾಣುವುದಿಲ್ಲ. ಭಾರತದ ಗುಹಾ ವಾಸ್ತು ಶಿಲ್ಪದಲ್ಲಿ ಕಾಲಕಾಲಕ್ಕೆ ಹೊಸ ವಸ್ತು, ಭಾವ ವಿನ್ಯಾಸಗಳ ಅಳವಡಿಕೆಯಿಂದಾಗಿ ಉಂಟಾದ ವಿಕಾಸಗತಿ ಎದ್ದುಕಾಣುತ್ತದೆ. ಆದರೆ ಚೀನದ ಕೃತಿಗಳು ಬಹುಮಟ್ಟಿಗೆ ಸಂಪ್ರದಾಯಬದ್ಧವಾಗಿ ಅನುಕರಣಾತ್ಮಕವಾಗಿಯೇ ಮುಂದುವರಿದವು.

	ಚೀನದ ಮೊದಲ ಗುಹಾಲಯಗಳು ಕಾನ್ಸೂ ಪ್ರಾಂತ್ಯದಲ್ಲಿ ಇವೆ. ಪಕ್ಕದ ಮಧ್ಯ ಏಷ್ಯದ ಬೌದ್ಧಾಲಯಗಳೇ ಇಲ್ಲಿಯವಕ್ಕೂ ಮಾದರಿ. ಇಲ್ಲಿಯ ಹೆಚ್ಚಿನ ಗುಹಾ ವಾಸ್ತುಕೇಂದ್ರಗಳೆಲ್ಲ ರೇಷ್ಮೆ ಹಾದಿಯ ಮೇಲೆಯೇ ಇವೆ. ಸ್ಥಳೀಯ ಸಾಹಿತ್ಯಕ ಆಧಾರಗಳ ಪ್ರಕಾರ ಕ್ರಿ. ಶ. 4ನೆಯ ಶತಮಾನದಲ್ಲೆ ಇಲ್ಲಿ ಗುಹಾನಿರ್ಮಾಣ ಪ್ರಾರಂಭವಾಯಿತೆಂದು ತಿಳಿದರೂ ಇದುವರೆಗೆ ಸಿಕ್ಕಿರುವ ಕೃತಿಗಳಲ್ಲಿ ಯಾವುವೂ 5ನೆಯ ಶತಮಾನಕ್ಕೆ ಮುಂಚಿನವಲ್ಲ. ಕಾನ್ಸೂವಿನ ಒಂದು ಮುಖ್ಯ ಗುಹಾವಾಸ್ತು ಕೇಂದ್ರ ತುನ್‍ಹ್ವಾಂಗ್. ಈ ಒಂದೆ ಸ್ಥಳದಲ್ಲಿ ಸುಮಾರು 480 ಗುಹೆಗಳಿವೆ. ಅತ್ಯಂತ ಪ್ರಾಚೀನವಾದವು `ವೇ ರಾಜವಂಶದ ಕಾಲಕ್ಕೆ (4-6ನೆಯ ಶತಮಾನಗಳು) ಸೇರಿದವು. ಇತ್ತೀಚಿನವೆಂದರೆ ಯು ಆನ್ ಅರಸರ (13-14ನೆಯ ಶತಮಾನಗಳು) ಕಾಲದವು. ಹೆಚ್ಚಿನವು ಟಾಂಗ್ (618-707) ಮತ್ತು ಸುಂಗ್ (960-1126) ರಾಜವಂಶಗಳ ಕಾಲದವು. ತುನ್ ಹ್ವಾಂಗ್‍ನ ಗುಹೆಗಳ ವಿನ್ಯಾಸ ಬಹು ಸರಳ. ದೇವಾಲಯಗಳಲ್ಲಿ ಹಲವು ಭಿಕ್ಷ ಕೋಣೆಗಳಿವೆ. ದೇವಗೃಹ ಮತ್ತು ಭಿಕ್ಷು ಕೋಣೆಗಳು ಜೊತೆಯಾಗಿ ಇರುವುದೇ ಹೆಚ್ಚು. ಇಲ್ಲಿಯ ಗುಹೆಗಳು ತಮ್ಮ ವಾಸ್ತುರೂಪಕ್ಕಿಂತಲೂ, ಇವುಗಳಲ್ಲಿರುವ ಶಿಲ್ಪಗಳು ಮತ್ತು ವರ್ಣಚಿತ್ರಗಳಿಂದ ಹೆಚ್ಚು ಹೆಸರಾಗಿವೆ. ಇಲ್ಲಿಯ ಶಿಲ್ಪಗಳಲ್ಲಿ ಮಹಾಯಾನ ಬೌದ್ಧಪಂಥದ ಮೂರ್ತಿಗಳಾದ ವಿವಿಧ ರೀತಿಯ ಬುದ್ಧರ ಅವಲೋಕಿತೇಶ್ವರ ಮತ್ತು ಉಪದೇವತೆಗಳ ಮೂರ್ತಿಗಳು ಕಂಡುಬರುತ್ತವೆ. ಕಾನ್ಸೂ ಪ್ರಾಂತ್ಯದ ಯು-ಲಿನ್-ಕು, ತೀನ್-ತಿ-ಷಾನ್, ಯುಂಗ್-ಚಿಂಗ್, ಮೇ-ಚಿ-ಷಾನ್‍ಗಳಲ್ಲೂ ಗುಹಾಲಯಗಳಿವೆ. ಮೇ-ಚಿ-ಷಾನ್‍ನ ಕೆಲವು ದೇವಾಲಯಗಳು ಕ್ರಿ. ಶ. ಸು. 5ನೆಯ ಶತಮಾನಕ್ಕೆ ಸೇರಿದವು. ತೀನ್-ಷಾನ್‍ನ ಒಂದು ಬಂಡೆಯಲ್ಲಿರುವ 85' ಎತ್ತರದ ಕುಳಿತ ಬುದ್ಧಮೂರ್ತಿ, ಯುಂಗ್-ಚಿಂಗ್ ನಲ್ಲಿರುವ ಅನೇಕ ಸೂಪ್ತಗಳ ಉಬ್ಬು ಶಿಲ್ಪಗಳು ಮತ್ತು 80' ಎತ್ತರದ ಬುದ್ಧ ಮೂರ್ತಿ ಹೆಸರಾಂತ ಶಿಲ್ಪಗಳು.

	ಮಂಚೂರಿಯ ಪ್ರಾಂತ್ಯದ ವನ್-ಪೊ-ತಾಂಗ್‍ನಲ್ಲೂ `ವೇ ರಾಜವಂಶದ ಕಾಲದ ಪ್ರಾಚೀನ ಗುಹಾವಸ್ತುಕೃತಿಗಳಿವೆ.

	ಷಾನ್ಸೀ ಪ್ರಾಂತ್ಯದಲ್ಲಿರುವ ಯುನ್ ಕಾಂಗ್‍ನಲ್ಲಿ ಸುಮಾರು 40 ಗುಹೆಗಳಿವೆ. ಈ ಗುಹೆಗಳಲ್ಲಿಯ ರಚನಾತಂತ್ರ ಬಾಮಿಯಾನನ್ನು ಅನುಸರಿಸುತ್ತದೆ. 55' ಎತ್ತರವಿರುವ ಇಲ್ಲಿಯ ಒಂದು ಆಸೀನ ಬುದ್ಧ ಮೂರ್ತಿ ಸುಂದರ ಶಿಲ್ಪ. ತಿಯೆನ್-ಲುಂಗ್-ಷಾನ್‍ನ ಕೆಲವು ಗುಹೆಗಳಲ್ಲಿ ಮನಸೆಳೆಯುವಂಥ ಅಪ್ಸರೆಯರ ಉಬ್ಬು ಶಿಲ್ಪಗಳಿವೆ.
ಷಾನ್-ತುಂಗ್ ಪ್ರಾಂತ್ಯದ ಚಿಯೆನ್-ಪೊ-ಯೈ ಎಂಬಲ್ಲಿಯ ಒಂದು ದೊಡ್ಡ ಬಂಡೆ ಸಹಸ್ರ ಬುದ್ಧರ ಬಂಡೆ ಎಂದು ಹೆಸರಾಗಿದೆ. ಇಲ್ಲಿ ಐದು ಗುಹೆಗಳೂ ಸುಮಾರು 70 ಕ್ಕೂ ಹೆಚ್ಚು ಮೂರ್ತಿ ಕೋಷ್ಠಗಳೂ ಇವೆ. ಕ್ರಿ. ಶ. 618ರಲ್ಲಿ ಮಾಡಿದ ಎರಡನೆಯ ಗುಹೆಯಲ್ಲಿರುವ ಬುದ್ಧ ತ್ರಿಮೂರ್ತಿಗಳ ವಿಗ್ರಹಗಳು (ಬುದ್ಧ, ಅಮಿತಾಭ ಮತ್ತು ಶಾಕ್ಯಮುನಿ) ಉತ್ತಮ ಶಿಲ್ಪಗಳು.

ಸಿಂಕಿಯಾಂಗ್ ಪ್ರಾಂತ್ಯದ ಕೂಚದ ಗುಹೆಗಳು ಸಣ್ಣವಾದರೂ ಭಿತ್ತಿಗಳ ಮೇಲಿರುವ ವರ್ಣಚಿತ್ರಗಳಿಂದಾಗಿ ಗಮನಾರ್ಹವಾದವು. ಇದೇ ಪ್ರಾಂತ್ಯದ ತತ್ಸು ಎಂಬಲ್ಲಿ 650' ಉದ್ದ ಮತ್ತು 65' ಎತ್ತರದ ವಿಶಾಲ ಬಂಡೆಯ ಮೈಯಲ್ಲಿ ಬುದ್ಧನ ಜೀವನ ಕಥೆಗಳು, ಪರಿನಿರ್ವಾಣ, ಜಾತಕಕಥೆಗಳು ಮುಂತಾದ ಅಸಂಖ್ಯಾತ ಶಿಲ್ಪಗಳನ್ನು ಕಂಡರಿಸಲಾಗಿದೆ. ಹಲವಕ್ಕೆ ವಿವರಣಾತ್ಮಕ ಶಾಸನಗಳೂ ಇವೆ.
ಹೋಪೇ ಪ್ರಾಂತ್ಯದ ಗುಹಾ ವಾಸ್ತು ಕೇಂದ್ರಗಳಲ್ಲಿ ಸಿಯಾಂಗ್-ತಂಗ್-ಷಾನ್ ಮುಖ್ಯವಾದ್ದು. ಇಲ್ಲಿಯ 6ನೆಯ ಶತಮಾನದ ಶಿಲ್ಪಗಳು ಜೀವಭರಿತವಾಗಿರುವಂತೆ ಕಾಣುವ ಶ್ರೇಷ್ಠ ಶಿಲ್ಪಗಳು. ಇವನ್ನು ಬಂಡೆಯಲ್ಲಿ ಉಬ್ಬುಶಿಲ್ಪದಂತೆ ಕಡೆದಿದ್ದರೂ ಪೂರ್ಣ ಶಿಲ್ಪದಂತೆಯೇ ಇವು ಬಹಳ ಮೇಲೆದ್ದಿವೆ. ಇವುಗಳಲ್ಲಿ ಮೂರನೆಯ ಗುಹೆಯಲ್ಲಿರುವ ಬುದ್ಧಮೂರ್ತಿ ಸಮೂಹ ಹೆಚ್ಚು ಹೆಸರಾಗಿದೆ. ಈ ಶಿಲ್ಪದಲ್ಲಿ ಮಧ್ಯದಲ್ಲಿ ಬುದ್ಧ, ಎರಡೂ ಕಡೆ ಇಬ್ಬರು ಲೋಹನ್‍ರು (ಬೋಧಿಸತ್ವ) ಮತ್ತು ಇಬ್ಬರು ಪ್ರತ್ಯೇಕ ಬುದ್ಧರನ್ನು ಕೆತ್ತಲಾಗಿದೆ. 16ನೆಯ ಶತಮಾನದ ಕೆಲವು ಗುಹೆಗಳೂ ಇಲ್ಲಿವೆ. 
ಹೋನಾನ್ ಪ್ರಾಂತ್ಯದ ಹಲವು ಸ್ಥಳಗಳಲ್ಲಿರುವ ಗುಹೆಗಳು ಉಚ್ಛತಮ ಶಿಲ್ಪಗಳಿಗೂ ನಾಜೂಕಿನ ವಾಸ್ತುನಿರೂಪಣೆಗೂ ಪ್ರಸಿದ್ಧವಾಗಿವೆ. ಲಂಗ್-ಮೇನ್‍ನಲ್ಲಿ ಯೀ ನದಿಯ ಎರಡೂ ಕಡೆಗಳ ಕಡಿದಾದ ದಡಗಳಲ್ಲಿ ಗುಹೆಗಳನ್ನು ಕಲಾತ್ಮಕವಾಗಿ ಕಡಿಯಲಾಗಿದೆ. ಈ ಗುಹೆಗಳು 5-8ನೆಯ ಶತಮಾನಗಳ ಕಾಲಕ್ಕೆ ಸೇರಿದವು. ಇಲ್ಲಿಯ ಕುನ್ವಂಗ್ ಗುಹೆ (493-525) ಆಯಾಕಾರವಾಗಿದ್ದರೂ ಇದಕ್ಕೆ ಪೀಪಾಯಿಯ ಆಕಾರದ ಚಾವಣಿ ಇದೆ. ಇಲ್ಲಿಯ ಪಿನ್ಯಂಗ್ ಗುಹೆಯಲ್ಲಿ (523) ಇಕ್ಕೆಲ್ಲಗಳಲ್ಲಿ ಆನಂದ-ಮಹಾಕಶ್ಯಪ ಮತ್ತು ಇಬ್ಬರು ಬೋಧಿಸತ್ವರನ್ನು ಹೊಂದಿರುವ ಬುದ್ಧಮೂರ್ತಿಯೂ ಬೌದ್ಧತ್ರಿಮೂರ್ತಿಗಳ ವಿಗ್ರಹಗಳೂ ಚೀನದ ವೇ ಶಿಲ್ಪ ಸಂಪ್ರದಾಯದ ಉತ್ತಮ ಉದಾಹರಣೆಗಳೆಂದು ಪರಿಗಣಿತವಾಗಿವೆಯಲ್ಲದೆ, ಇವೇ ಜಪಾನಿನ ತೋರಿ ಶಿಲ್ಪ ಸಂಪ್ರದಾಯಕ್ಕೆ ಮೂಲ ಮಾದರಿಗಳನ್ನು ಒದಗಿಸಿದುವೆಂದು ನಂಬಲಾಗಿದೆ. ಲುಂಗ್-ಮೇನ್‍ನ ಇತರ ಗುಹೆಗಳಲ್ಲಿರುವ ಹಾರುತ್ತಿರುವ ಅಪ್ಸರೆಯರಿಂದ ಸುತ್ತುವರಿದ ಕಮಲಪುಷ್ಪ (520) ಮತ್ತು 50' ಎತ್ತರದ ವೈರೋಚನನ ವಿಗ್ರಹ (ಸು. 675) ಬಹು ಪರಿಣಾಮಕಾರಿ ಶಿಲ್ಪಕೃತಿಗಳು.
ಚೀನದಲ್ಲಿ ಬೌದ್ಧರಲ್ಲದೆ ಟಾವೊ ಸಂಪ್ರದಾಯದವರು ಸಹ ಗುಹಾವಸ್ತು ರೀತಿಯನ್ನು ಅಪರೂಪವಾಗಿ ಬಳಸಿಕೊಂಡಿದ್ದಾರೆ. ಷಾನ್ನೀ ಪ್ರಾಂತ್ಯದ ಲುಂಗ್-ಷಾನ್‍ನಲ್ಲಿ 1234 -39ರಲ್ಲಿ ಕೊರೆಯಲಾದ ಎರಡು ಗುಹೆಗಳು ಟಾವೋ ಧರ್ಮೀಯರದು. ಇವುಗಳಲ್ಲಿ ಆ ಸಂಪ್ರದಾಯದ ಪೌರಾಣಿಕ ವ್ಯಕ್ತಿಗಳಾದ ಷೇನ್-ನುಂಗ್, ಹ್ವಾಂಗ್-ತಿ ಮತ್ತು ಪು-ಹ್ನಿ ಇವರ ವಿಗ್ರಹಗಳಿವೆ. ಸಿಂಕಿಯಾಂಗ್ ಪ್ರಾಂತ್ಯದ ತತ್ಸುವಿನಲ್ಲೂ ಟಾವೋ ಸಂಪ್ರದಾಯದವರ ಶಿಲ್ಪಗಳೂ ದೇವಾಗಾರಗಳೂ ವಿಹಾರಗಳೂ ಇವೆ.

ಶ್ರೀಲಂಕಾ, ಕಾಂಬೋಡಿಯಾ : ಶ್ರೀಲಂಕಾದಲ್ಲಿ ಕ್ರಿ. ಪೂ. 3ನೆಯ ಶತಮಾನದಲ್ಲೇ ಬೌದ್ಧದರ್ಮ ಪಸರಿಸಿ ಇಂದಿಗೂ ಅಲ್ಲಿಯ ಪ್ರಧಾನ ಧರ್ಮವಾಗಿರುವುದಾದರೂ ಅಲ್ಲಿ ಹೆಚ್ಚಿನ ಗುಹಾ ವಾಸ್ತುಕೃತಿಗಳಿಲ್ಲ. ಇದು ಕೊರೆಯಲು ಕಠಿಣವಾದ ಗಟ್ಟಿ ಬಂಡೆಗಳ ಪ್ರದೇಶವಾಗಿರುವುದು ಕಾರಣವಿರಬಹುದು. ಕ್ರಿ.ಪೂ. 3-2ನೆಯ ಶತಮಾನಕ್ಕೆ ಸೇರಿದ ಕೆಲವು ಬಿಕ್ಷು ವಾಸ ಗುಹೆಗಳು ಶಾಸನ ಸಹಿತ ಇಲ್ಲಿ ಕಂಡು ಬಂದಿವೆಯಾದರೂ ಇವು ವಾಸ್ತುಶಿಲ್ಪ ದೃಷ್ಟಿಯಿಂದ ಮುಖ್ಯವಾದವಲ್ಲ. ಇವೆಲ್ಲ ಸಾಮಾನ್ಯವಾಗಿ ಸ್ವಾಭಾವಿಕ ಗುಹೆಗಳು. ಭಿಕ್ಷುಗಳ ಮಂಚಗಳು ಮತ್ತು ಸ್ವಲ್ಪಮಟ್ಟಿಗೆ ಚಾವಣಿಯನ್ನು ಮಾತ್ರ ಕೆತ್ತಲಾಗಿದೆ. ಸಿಂಹಳದ ಗುಹಾ ವಾಸ್ತುವಿನಲ್ಲಿ ಮುಖ್ಯವಾದ್ದು ಒಂದನೆಯ ಪರಾಕ್ರಮ ಬಾಹುವಿನ ಆಳ್ವಿಕೆಯಲ್ಲಿ (12ನೆಯ ಶತಮಾನ) ಪೊಲೊನ್ನರುವ ಬಳಿ ಕೊರೆಯಲಾಗಿರುವ ಗಲ್ ವಿಹಾರ. ಇಲ್ಲಿ ಎರಡು ಆಸೀನವಾದ ಒಂದು ನಿಂತಿರುವ ಮತ್ತು ಮತ್ತೊಂದು ಮಲಗಿರುವ ಬುದ್ಧಮೂರ್ತಿಗಳನ್ನು ಕೆತ್ತಲಾಗಿದೆ. ವೆಲಿಗಮ ಮತ್ತು ಇಸುರುಮುನಿಯ ಎಂಬಲ್ಲೂ ಶಿಲೆಯಲ್ಲಿ ಕಂಡರಿಸಿದ ಕೆಲವು ಶಿಲ್ಪಗಳಿವೆ.

ಬೌದ್ಧಧರ್ಮ ಹರಡಿದ್ದ ಕಾಂಬೋಡಿಯ ದೇಶದಲ್ಲೂ ಈ ವಾಸ್ತುಶಿಲ್ಪ ಸಂಪ್ರದಾಯ ಸ್ವಲ್ಪ ಮಟ್ಟಿಗೆ ಪ್ರಚಲಿತವಾಗಿತ್ತು. ಅಲ್ಲಿಯ ಪನಾಮ್ ಕುಲೇನ್ ಎಂಬಲ್ಲಿ ಹಲವು ಭಿಕ್ಷುಗೃಹಗಳೂ ಶಿಲ್ಪಗಳು ಶಾಸನಗಳೂ ಇವೆ ಎಂಬ ಹೇಳಿಕೆಯಿದೆ. ಆದರೆ ಇವುಗಳ ಬಗ್ಗೆ ಹೆಚ್ಚು ಅಧ್ಯಯನ ನಡೆದಿಲ್ಲ.
ಈತಿಯೋಪಿಯ : ಗುಹಾ ವಾಸ್ತು ಸಂಪ್ರದಾಯದ ಕೆಲವು ಕುತೂಹಲಕರ ಕೃತಿಗಳು ಈತಿಯೋಪಿಯಾದಲ್ಲಿವೆ. ಇವೆಲ್ಲ ಕ್ರೈಸ್ತಧರ್ಮಕ್ಕೆ ಸಂಬಂಧಿಸಿದವು. ಉತ್ತರ ಈತಿಯೋಪಿಯದ ವೆಕ್ರೊ, ಅಂಬ ಮೈಕೆಲ್, ಮುಗ್ಗ, ದಾವೆಂತ್ ಎಂಬ ಸ್ಥಳಗಳಲ್ಲಿ ಗುಹಾ ಇಗರ್ಜಿಗಳಿವೆ. ಇವುಗಳಲ್ಲಿ ಸಾಮಾನ್ಯವಾಗಿ ಕಂಬಗಳುಳ್ಳ ಅಥವಾ ಇಲ್ಲದಿರುವ ಒಂದು ಹಜಾರವಷ್ಟೇ ಇರುತ್ತದೆ. ಇವುಗಳ ಕಾಲನಿಷ್ಕರ್ಷೆ ಕಷ್ಟ. ಆದರೆ 8-12ನೆಯ ಶತಮಾನಗಳವಾಗಿರಬಹುದೆಂದು ಊಹಿಸಲಾಗಿದೆ. ಈ ಗುಹಾ ಇಗರ್ಜಿಗಳಿಂದಲೇ ಸ್ಪೂರ್ತಿಗೊಂಡು ಬೆಳೆದ ಪೂರ್ಣವಾಗಿ ಶಿಲೆಯಲ್ಲಿ ಕೊರೆದ ಅನೇಕ ಇಗರ್ಜಿಗಳು ಲಾಲಿಬಾಲ, ದಾರಸ್ಗೆ, ಆಬ್ರಹ, ಆಸ್ಟೇನ ಮುಂತಾದೆಡೆಗಳಲ್ಲಿದೆ. ಲಾಲಿಬಾಲ ಒಂದರಲ್ಲೇ ಇಂದ ಹತ್ತು ಇಗರ್ಜಿಗಳಿವೆ. ಇವೆಲ್ಲ ಸ್ಥಳೀಯ ಕ್ರೈಸ್ತ ಸಂತ ಮತ್ತು ದೊರೆ ಲಾಲಿಬಾಲ (ಕ್ರಿ. ಶ. 12ನೆಯ ಶತಮಾನ) ಕಟ್ಟಿಸಿದವೆಂದು ನಂಬಿಕೆ. ಇವುಗಳಲ್ಲಿ ಇಗರ್ಜಿಗಳಲ್ಲಿ ಸಾಮಾನ್ಯವಾಗಿರುವಂತೆ ಪ್ರಾರ್ಥನಾ ಹಜಾರ, ಪವಿತ್ರ ಕೋಷ್ಠ ಅಥವಾ ವೇದಿಕೆ ಮತ್ತು ಪಕ್ಕ ಹಜಾರಗಳು ಇರುತ್ತವೆ. ಲಾಲಿಬಾಲದ ಗಿಯೋರ್ಗಿಸ್ ಇಗರ್ಜಿಯ ತಳವಿನ್ಯಾಸ ಸಮಾನ ಅಳತೆ ತೋಳುಗಳುಳ್ಳ ಗ್ರೀಕ್ ಶಿಲುಬೆಯ ಆಕಾರದಲ್ಲಿವೆ. ಇವುಗಳ ಮೇಲ್ಚಾವಣಿಯೂ ಕಲ್ಲಿನ ಬಂಡೆಯೇ ಆದರೂ ಒಳಗೆ ಮರದ ಭಾಗಗಳನ್ನು ಅಲಂಕಾರಿಕವಾಗಿ ಅಳವಡಿಸಿರುವುದೂ ಉಂಟು. ಇಂಥ ಕೆಲವು ಇಗರ್ಜಿಗಳಲ್ಲಿ ವರ್ಣಚಿತ್ರಗಳೂ ಇವೆ. ಕ್ರಿ.ಶ 6-10ನೆಯ ಶತಮಾನಗಳ ನಡುವೆ ಕೊರೆಯಲಾಗಿರುವ ದಾಬ್ರ ದಾಮ್ಮೊದಲ್ಲಿಯ ಕ್ರೈಸ್ತ ಇಗರ್ಜಿ ಈತಿಯೋಪಿಯದ ಮುಖ್ಯ ವಾಸ್ತುಕೃತಿಗಳಲ್ಲೊಂದು. ಇದರ ತಳ ವಿನ್ಯಾಸ ಸಿರಿಯದ ಬ್ಯಾಸಿಲಿಕಗಳಂತೆ ಮಧ್ಯ ಮತ್ತು ಪಕ್ಕ ಹಜಾರಗಳು. ಮಧ್ಯ ಹಜಾರದ ಹಿಂದೆ ಅರೆವೃತ್ತಾಕಾರದ ಒಳನಡೆ ಇವೆ. ಇದು ಎರಡು ಅಂತಸ್ತುಗಳಲ್ಲಿದೆ. ಮೊದಲ ಅಂತಸ್ತಿನ ಕ್ರೈಸ್ತ ಗುರುಗಳಿಗಾಗಿ ಕೋಣೆಗಳಿವೆ. ದಾಬ್ರ ದಾಮ್ಮೊದ ಈ ವಿಹಾರದಲ್ಲಿ ಉತ್ತಮ ಅಲಂಕರಣ ಶಿಲ್ಪಗಳು ಸಹ ಇವೆ. ಈತಿಯೋಪಿಯದ ರಾಜಧಾನಿಯಾದ ಆಡಿಸ್ ಆಬಬದಲ್ಲೂ ಶಿಲೆಯಲ್ಲಿ ಕೊರೆದ ಒಂದು ಇಗರ್ಜಿ ಇದೆ. ಆದರೆ ಈಗ ಇದು ಬಹು ಶಿಥಿಲಾವಸ್ಥೆಯಲ್ಲಿದೆ. ಇಲ್ಲಿಂದ ಸುಮಾರು 32 ಕಿ.ಮೀ. ಪಶ್ಚಿಮದಲ್ಲಿರುವ ಆಡದಿ ಮರ್ಯಾಮ್ ಇಗರ್ಜಿ ಭೂಗರ್ಭದಲ್ಲಿ ಕೊರೆಯಲಾಗಿರುವ ಒಂದು ಗುಹೆ. ಇದನ್ನು ಲಾಲಿಬಾಲದ ಕಾಲದ ಅನಂತರ ಮತ್ತು 16ನೆಯ ಶತಮಾನಕ್ಕೆ ಮುಂಚೆ ಯಾವುದೋ ಕಾಲದಲ್ಲಿ ಕೊರೆದಿರಬೇಕೆಂದು ಊಹಿಸಲಾಗಿದೆ.					(ಎಸ್.ಎಸ್.)

ಭಾರತ : ಬೆಟ್ಟಗಳನ್ನು ಕೊರೆದು ಆಲಯಗಳನ್ನು ನಿರ್ಮಿಸಿ, ಶಿಲ್ಪಗಳನ್ನು ಬಿಡಿಸುವ ಪದ್ಧತಿ ಅತ್ಯಂತ ಪ್ರಾಚೀನ ಕಾಲದಿಂದಲೂ ಹಲವು ದೇಶಗಳಲ್ಲಿ ಇತ್ತಾದರೂ ಗುಹಾಲಯ ನಿರ್ಮಾಣ ಕಾರ್ಯದಲ್ಲಿ ಪ್ರಾಚೀನ ಭಾರತೀಯರ ವಿನ್ಯಾಸ, ನಯ, ನಮೂನೆಗಳು ಅಸದೃಶ ಮತ್ತು ಆಶ್ಚರ್ಯಕರವಾಗಿವೆ. ಭಾರತದಲ್ಲಿ ಕ್ರಿ. ಪೂ. 3 ರಿಂದ ಕ್ರಿ. ಶ. 7ನೆಯ ಶತಮಾನದವರೆಗಿನ ಕಾಲದಲ್ಲಿ ಸುಮಾರು 1,200ಕ್ಕೂ ಹೆಚ್ಚು ಗುಹಾ ದೇವಾಲಯಗಳು ನಿರ್ಮಾಣವಾದುವು. ಮೊಟ್ಟಮೊದಲು ಗುಹಾಲಯಗಳನ್ನು ನಿರ್ಮಿಸಿದವರು ಬೌದ್ಧರು. ಅನಂತರ ಜೈನರೂ ಹಿಂದೂಗಳೂ ಈ ಪದ್ಧತಿಯನ್ನು ಅಳವಡಿಸಿಕೊಂಡರು. ಬೌದ್ಧ ದರ್ಶನಕ್ಕೆ ಸಂಬಂಧಿಸಿದ ಗುಹಾ ದೇವಾಲಯಗಳು ಸಂಖ್ಯೆಯಲ್ಲಿ ಅತ್ಯಂತ ಹೆಚ್ಚಾಗಿದೆ. ಬೌದ್ಧರು ಪ್ರಾರಂಭದಲ್ಲಿ ಗುಹಾಲಯಗಳ ರಚನೆಗೆ ಅಷ್ಟು ಮಹತ್ವ ನೀಡಿದ ಕಾರಣಗಳನ್ನು ಕುರಿತು ವಿದ್ವಾಂಸರು ವಿವೇಚಿಸಿದ್ದಾರೆ. ಗುಹಾಲಯಗಳನ್ನು ಬೆಟ್ಟದಲ್ಲೇ ಕೊರೆಯುವುದರಿಂದ ಅವು ಅದರ ಅವಿಭಾಜ್ಯ ಭಾಗವಾಗಿ ಪರ್ವತದಂತೆ ಅಚಲವೂ, ಅಚಂದ್ರಾರ್ಕವೂ ಆಗಿ ಮುಂದುವರಿಯುವುದೆಂಬ ನಂಬಿಕೆಯೂ ಬೌದ್ಧ ಬಿಕ್ಷುಗಳು ಗಿರಿಧಾಮಗಳ ಮಧ್ಯೆ ಶಾಂತಿಯಿಂದ ಧ್ಯಾನಾಸಕ್ತರಾಗಲು ಇಲ್ಲಿ ಎಡೆ ದೊರಕುವುದೆಂಬುದೂ ಮುಖ್ಯ ಕಾರಣಗಳು.

ಬಿಹಾರ, ಮಹಾರಾಷ್ಟ್ರ, ಆಂದ್ರಪ್ರದೇಶ, ಗುಜರಾತ್, ರಾಜಸ್ಥಾನ, ಒರಿಸ್ಸ, ಮೈಸೂರು ಮತ್ತು ತಮಿಳು ನಾಡುಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿ ಗುಹಾ ದೇವಾಲಯಗಳನ್ನು ನಿರ್ಮಿಸಲಾಗಿದೆ. ಕ್ರಿ.ಪೂ. 3 ನೆಯ ಶತಮಾದಿಂದ ಕ್ರಿ.ಶ. 2ನೆಯ ಶತಮಾನದವರೆಗೆ ಹೀನಯಾನ ಬೌದ್ಧ ಪಂಥದವರು ಗುಹಾ ದೇವಾಲಯಗಳನ್ನು ಕೊರೆಸಿದರು. ಅನಂತರ 7ನೆಯ ಶತಮಾನದವರೆಗೂ ಮಹಾಯಾನ ಬೌದ್ಧ ಶಾಖೆಗೆ ಸಂಬಂಧಿಸಿದ ಗುಹಾ ದೇವಾಲಯಗಳು ನಿರ್ಮಾಣವಾದುವು. ಕ್ರಿ. ಶ. 5ನೆಯ ಶತಮಾದಿಂದ ಜೈನ ಪಂಥೀಯರೂ ವೈದಿಕ ಮತಾವಲಂಬಿಗಳೂ ಗುಹಾಲಯಗಳನ್ನು ಕೊರೆಸಿದರು. ಶಿಲ್ಪಕಲೆ ಪ್ರಪ್ರಥಮವಾಗಿ ಸಮ್ರಾಟ ಅಶೋಕನ ಕಾಲದಲ್ಲಿ ಪ್ರಚಾರಕ್ಕೆ ಬಂತು. ಅಶೋಕ ಚಕ್ರವರ್ತಿ ಬೌದ್ಧಮತ ಪ್ರಚಾರ ಕಾರ್ಯವನ್ನು ಅತ್ಯಂತ ಶ್ರದ್ಧೆಯಿಂದ ಕೈಗೊಂಡ; ಬೌದ್ಧ ಬಿಕ್ಷುಗಳಿಗಾಗಿ ಅನೇಕ ಸ್ತೂಪಗಳನ್ನು ವಿಹಾರಗಳನ್ನೂ ಗುಹಾಲಯಗಳನ್ನೂ ನಿರ್ಮಿಸಿದ. ಉದಯಗಿರಿ, ಬರಾಬರ್ ಬೆಟ್ಟಗಳು, ಪಾಶ್ರ್ವನಾಥ ಗುಡ್ಡ ಮತ್ತು ಗಿರ್ನಾರ್ ಬೆಟ್ಟಗಳಲ್ಲಿ ಅಶೋಕನ ಕಾಲದಲ್ಲಿ ಗುಹಾಲಯಗಳನ್ನು ಕೊರೆಯಲಾಯಿತು. ಅನಂತರ ದಖನ್ನಿನ ಪಶ್ಚಿಮ ಭಾಗದಲ್ಲಿ ಬೇರ ಬೇರೆ ಸಂತತಿಗಳ ಆಳ್ವಿಕೆಯಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಗುಹಾಲಯಗಳು ನಿರ್ಮಾಣವಾದುವು. ಪ್ರಾರಂಭದಲ್ಲಿ ಹೀನಾಯಾನ ಪಂಥಕ್ಕೆ ಹೊಂದಿಕೊಂಡಂತೆ ಅವುಗಳಲ್ಲಿ ಶಿಲ್ಪಗಳನ್ನು ಕೆತ್ತಿ ಚಿತ್ರಗಳನ್ನು ಬಿಡಿಸಲಾಗಿತ್ತು. ಕ್ರಮೇಣ ಅವುಗಳಲ್ಲಿ ಹೆಚ್ಚು ಗುಹಾಲಯಗಳನ್ನು ಮಹಾಯಾನ ಮತ್ತು ಇತರ ಪಂಥಗಳಿಗೆ ಪರಿವರ್ತಿಸಲಾಯಿತು.

ಪಶ್ಚಿಮ ಘಟ್ಟಗಳಿಗೆ ಹೊಂದಿಕೊಂಡಂತೆ ಮಹಾರಾಷ್ಟ್ರದ ನಾಸಿಕದಿಂದ ಸುತ್ತ ಮುತ್ತಿನ ಸುಮಾರು 320 ಕಿ.ಮೀ. ಪ್ರದೇಶದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಗುಹಾಲಯಗಳನ್ನು ಕೊರೆಯಲಾಗಿದೆ. ಪರ್ವತಮಯವಾದ ಈ ಪ್ರದೇಶ ಗುಹಾಲಯ ನಿರ್ಮಾಣಕ್ಕೆ ಅನುಕೂಲವಾಗಿತ್ತು. ಈ ಪ್ರತಿಯೊಂದು ಗುಹಾಲಯದಲ್ಲೂ ಪ್ರಾರ್ಥನೆಗಾಗಿ ಒಂದು ವಿಶಾಲ ಅಂಗಳ ಮತ್ತು ಒಂದು ಚೈತ್ಯ ಇದ್ದೇ ಇರುತ್ತವೆ. ಚೈತ್ಯದಲ್ಲಿ ಬುದ್ಧನ ಅವಶೇಷಗಳನ್ನೊಳಗೊಂಡ ಸ್ತೂಪ ಅಥವಾ ಧಾತುಗರ್ಭ ಇರುತ್ತದೆ. ಇದನ್ನು ಬಂಡೆಯಲ್ಲಿ ಕೊರೆದು ಅಲಂಕರಿಸಲಾಗಿರುತ್ತದೆ. ಅಜಂತ ಮತ್ತು ಕಾರ್ಲೆಯ ಗುಹಾಲಯಗಳಿರುವ ವಿಶಾಲವಾದ ಚೈತ್ಯಾಲಯಗಳು ಸುಮಾರು 30' ಎತ್ತರದ ಸ್ತೂಪಗಳನ್ನೊಳಗೊಂಡಿವೆ.

ಬಿಹಾರದ ಬರಾಬರ್ ಗುಹಾಲಯಗಳು ಅತ್ಯಂತ ಪ್ರಾಚೀನವಾದುವು. ಬುದ್ಧ ಗಯೆಯಿಂದ ಉತ್ತರಕ್ಕೆ 26 ಕಿ.ಮೀ. ದೂರದಲ್ಲಿ ಫಲಗು ನದಿಯ ಎಡದಂಡೆಯ ಮೇಲೆ ಬರಾಬರ್ ಬೆಟ್ಟಗಳಲ್ಲಿ ಏಳು ಗುಹಾಲಯಗಳನ್ನೊ ಕೊರೆಯಲಾಗಿದೆ. ಅತಿ ದೊಡ್ಡದಾದ ನಾಗಾರ್ಜುನ ಗುಹಾಲಯ 46' ಉದ್ಧ ಮತ್ತು 19' ಅಗಲವಾಗಿರುವ ಒಂದೇ ಅಂಗಳದಿಂದ ಕೂಡಿದ್ದು. ಸುಧಾಮ ಮತ್ತು ಲೋಮಶ ಋಷಿಯ ಗುಹಾಲಯಗಳು ನಾಗಾರ್ಜುನ ಗುಹೆಗಿಂತಲೂ ಸ್ವಲ್ಪ ಚಿಕ್ಕವು. ಇಲ್ಲಿಯ ಆರು ಗುಹಾಲಯಗಳಲ್ಲಿ ಪಾಲಿ ಭಾಷೆಯಲ್ಲಿ ಕೆತ್ತಿರುವ ಶಾಸನಗಳಿವೆ. ಸುಧಾಮ ಗುಹಾಲಯ ಅಶೋಕನ ಆಳ್ವಿಕೆಯ 12ನೆಯ ವರ್ಷದಲ್ಲಿ ಕೆತ್ತಲಾದುದು. ಗೋಪೀ ಗುಹಾಲಯದಲ್ಲಿರುವ ಶಾಸನದ ಪ್ರಕಾರ ಅದು ಅಶೋಕನ ಮೊಮ್ಮಗನಾದ ದಶರಥನ ಆಳ್ವಿಕೆಯ ಕಾಲದಲ್ಲಿ ಕೊರೆಯಲ್ಪಟ್ಟದ್ದು. ಲೋಮಶ ಋಷಿಯ ಗುಹಾಲಯವನ್ನು ಮೌರ್ಯರ ಆಳ್ವಿಕೆಯಲೇ ಕೊರೆಯಲಾಯಿತೆಂದೂ ಅನಂತರ ವೈದಿಕ ಮತಾವಲಂಬಿಗಳು ಅದನ್ನು ಪರಿವರ್ತಿಸಿದರೆಂದೂ ಅಲ್ಲಿಯ ಶಾಸನಗಳಿಂದ ತಿಳಿದುಬರುತ್ತದೆ. ಈ ಒಂದು ಗುಹಾಲಯದಲ್ಲಿ ಮಾತ್ರ ಶಿಲ್ಪಗಳನ್ನು ಕೆತ್ತಲಾಗಿದೆ. ಬರಾಬರ್ ಗುಹಾಲಯಗಳ ಬಾಗಿಲುಗಳಿಂದ ಬೆಳಕು ಮತ್ತು ಗಾಳಿ ಒಳಗಿನ ಅಂಗಳಕ್ಕೆ ಬರುವಂತೆ ವ್ಯವಸ್ಥೆಯಿದೆ. ಇಲ್ಲಿಯ ಗುಹಾಲಯಗಳಿಗೆ ಮರದ ಬಾಗಿಲುಗಳನ್ನಾಗಲಿ ಇತರ ಉಪಕರಣಗಳನ್ನಾಗಲಿ ಅಳವಡಿಸಿಕೊಂಡಿರಲಿಲ್ಲ. ಅವುಗಳ ಒಳಭಾಗದ ಕಲ್ಲಿನ ಗೋಡೆಗಳನ್ನು ಅಂದವಾಗಿ ನುಣುಪುಗೊಳಿಸಲಾಗಿದೆ. ಬರಾಬರ್ ಗುಹಾಲಯಗಳು ಆಕಾರದಲ್ಲಿ ಚಿಕ್ಕವಾಗಿದ್ದು ಚಿತ್ರ ಶಿಲ್ಪದಿಂದ ಕೂಡಿರದಿದ್ದರೂ ಅತ್ಯಂತ ಪ್ರಾಚೀನವಾದವು. ರಾಜಗೃಹದ ಬಳಿಯಲ್ಲಿರುವ ಗುಹಾಲಯಗಳನ್ನೂ ಕ್ರಿಸ್ತಪೂರ್ವದಲ್ಲೇ ಕೊರೆಯಲಾಯಿತೆಂದೂ ಕ್ರಮೇಣ ಅವುಗಳಲ್ಲಿ ಮಾರ್ಪಾಡುಗಳಾದುವೆಂದೂ ತಿಳಿದುಬಂದಿದೆ.
ಒರಿಸ್ಸದ ಉದಯಗಿರಿ ಬೆಟ್ಟಗಳಲ್ಲಿರುವ ಗುಹಾಲಯಗಳು ವಾಸ್ತುಶಿಲ್ಪ ದೃಷ್ಟಿಯಿಂದ ಮುಖ್ಯವಾಗಿವೆ. ಕಟಕ್‍ನ ಅಗ್ನೇಯಕ್ಕೆ 26 ಕಿ.ಮೀ. ಮತ್ತು ಭುವನೇಶ್ವರದಿಂದ 7 ಕಿ.ಮೀ. ದೂರದಲ್ಲಿ ಮಹಾನದಿಯ ಮುಖ್ಯ ಭೂಮಿಯಲ್ಲಿ ದ್ವೀಪಗಳೋಪಾದಿಯಲ್ಲಿರುವ ಮರಗಿಡಗಳಿಂದಾವೃತವಾದ ಗುಡ್ಡಗಳಲ್ಲಿ ಬೌದ್ಧ ಗುಹಾಲಯಗಳಿವೆ. ಆದರೆ ಅವುಗಳಲ್ಲಿ ಒಂದು ಮಾತ್ರ ಬೌದ್ಧರದು. ಉಳಿದವು ಜೈನರವು. ಉದಯಗಿರಿಯಲ್ಲಿ 17 ಮುಖ್ಯ ಗುಹಾಲಯಗಳಿವೆ. ಇವಲ್ಲದೆ ಅನೇಕ ಸಣ್ಣ ಗುಹಾಶ್ರಮಗಳಿವೆ. ಇವನ್ನು ಬೌದ್ಧ ಭಿಕ್ಷುಗಳ ಧ್ಯಾನ ಹಾಗೂ ವಾಸಕ್ಕಾಗಿ ಕೊರೆಯಲಾಗಿತ್ತು. ಉದಯಗಿರಿಯ ಹೆಚ್ಚಿನ ಗುಹಾಲಯಗಳಲ್ಲಿ ಶಾಸನಗಳು ದೊರೆಯುತ್ತಿದ್ದರೂ ಅವನ್ನು ನಿರ್ಮಿಸಿದವರ ಹೆಸರುಗಳಾಗಲಿ, ಕಾಲವಾಗಲಿ ತಿಳಿದುಬರುವುದಿಲ್ಲ. ಹಾತಿಗುಂಫಾ ಗುಹಾಲಯದಲ್ಲಿರುವ ಶಾಸನ ಖಾರವೇಲನ ಸಾಧನೆಗಳನ್ನು ವಿವರಿಸುತ್ತದೆ. (ನೋಡಿ- ಖಾರವೇಲ) ಸಮೀಪದ ಖಂಡಗಿರಿ ಬೆಟ್ಟಗಳಲ್ಲೂ ಅಷ್ಟು ಪ್ರಾಚೀನವಲ್ಲದ ಅನೇಕ ಗುಹಾಲಯಗಳುಂಟು. ಉದಯಗಿರಿಯಿಂದ 10 ಕಿ.ಮೀ. ದೂರದಲ್ಲಿರುವ ಪೌಲಿ ಬಳಿಯ ಅಶ್ವತ್ಥಾಮ ಬಂಡೆಯ ಮೇಲೆ ಅಶೋಕ ಕ್ರಿ. ಪೂ. 250 ರಲ್ಲಿ ತನ್ನ ಶಾಸನವನ್ನು ಕೆತ್ತಿಸಿದ. ಆ ವೇಳೆಗೆ ಒರಿಸ್ಸದಲ್ಲಿ ಬೌದ್ಧಮತ ಪ್ರಚಾರದಲ್ಲಿತ್ತು. ಉದಯಗಿರಿಯ ಗುಹಾಲಯಗಳನ್ನು ಕ್ರಿ. ಪೂ. 250 ರಿಂದ ಕ್ರಿ. ಶ. 100ರ ಮಧ್ಯೆ ಕೊರೆಯಲಾಯಿತೆಂದು ಗೊತ್ತಾಗುತ್ತದೆ.

ಬೌದ್ಧಮತ ಕ್ಷೀಣಿಸಿ ಹಿಂದೂ ಮತ್ತು ಜೈನ ಮತಗಳು ಪ್ರಬಲವಾದಾಗ ಪ್ರಾಚೀನ ಗುಹಾಲಯಗಳು ಹಲವು ಬದಲಾವಣೆಗಳಿಗೆ ಒಳಗಾದುವಲ್ಲದೆ ಕೆಲವು ಹೊಸ ಆಲಯಗಳೂ ಕೊರೆಯಲ್ಪಟ್ಟವು. ಖಂಡಗಿರಿ ಬೆಟ್ಟಗಳಲ್ಲಿ ಹಲವು ಗುಹಾಲಯಗಳು ಜೈನಯತಿಗಳಿಗಾಗಿ ಕೊರೆಯಲ್ಪಟ್ಟವು. ಒರಿಸ್ಸದ ಎಲ್ಲ ಗುಹಾ ದೇವಾಲಯಗಳಲ್ಲೂ ಕಂಬಗಳಿಂದ ಕೂಡಿದ ವಿಹಾರಗಳೂ ಅವುಗಳಲ್ಲಿ ಭಿಕ್ಷುಗಳ ವಾಸಕ್ಕಾಗಿ ಕೊರೆಂiÀಲಾದ ಚಿಕ್ಕ ಚಿಕ್ಕ ಗುಹೆಗಳೂ ಸಾಮಾನ್ಯವಾಗಿ ಇರುತ್ತದೆ. ಉದಯಗಿರಿಯ ಗುಹಾಲಯಗಳಲ್ಲೆಲ್ಲ ರಾಣಿಗುಂಫ ಅತ್ಯಂತ ದೊಡ್ಡದು ಮತ್ತು ಶಿಲ್ಪದೃಷ್ಟಿಯಿಂದ ಸುಂದರವಾದ್ದು. ರಾಣಿಗುಂಫ ಎರಡು ಅಂತಸ್ತುಗಳಿಂದ ಕೂಡಿದ್ದು, ಮೊದಲನೆಯದು 63' ಚಚ್ಚೌಕಾಕಾರವಾಗಿಯೂ ಎರಡನೆಯದು 43' ಚಚ್ಚೌಕಾಕಾರವಾಗಿಯೂ ಇದೆ. ಇದರೆ ಮೇಲೆ ಸುಮಾರು 23' ಚಚ್ಚೌಕಾಕಾರದ ಮತ್ತೊಂದು ಅಂತಸ್ತನ್ನು ಕೊರೆಯಲು ಯೋಜಿಸಿದ್ದು ಕೈಬಿಡಲಾಗಿದೆ. ವಿಹಾರದ ಕಂಬಗಳನ್ನೂ ನಯಗೊಳಿಸಿ ಶಿಲ್ಪಾಕೃತಿಗಳನ್ನು ಕೊರೆಯಲಾಗಿದೆ.

ಸೌರಾಷ್ಟ್ರದಲ್ಲಿ ಮೌರ್ಯರ ಕಾಲದಿಂದಲೂ ಬೌದ್ಧ ಗುಹಾಲಯಗಳನ್ನು ಕೊರೆಯಲಾಗಿತ್ತು. ಗಿರ್ನಾರ್ ಬೆಟ್ಟ ಅತ್ಯಂತ ಪ್ರಾಚೀನ ಕಾಲದಿಂದಲೂ ಪವಿತ್ರ ಸ್ಥಳವೆಂದು ಪರಿಗಣಿಸಲ್ಪಟ್ಟಿತ್ತು. ಅಶೋಕ ಚಕ್ರವರ್ತಿಯ ಕಾಲದಲ್ಲಿ ಅಲ್ಲಿ ಬೌದ್ಧಮತ ವ್ಯಾಪಿಸಿತ್ತು. ಬೌದ್ಧರಿಗಾಗಿ ಗುಹಾಂತರ್ದೇವಾಲಯಗಳು ಅಲ್ಲಿ ಪ್ರಥಮವಾಗಿ ಕೊರೆಯಲ್ಪಟ್ಟಿದ್ದುವು. ಬೌದ್ಧಮತ ಕ್ಷೀಣಿಸಿದ ಅನಂತರ ಅದು ಜೈನರ ಕ್ಷೇತ್ರವಾಯಿತು. ಗಿರ್ನಾರ್ ಬೆಟ್ಟದ ಬಳಿಯಿರುವ ಜುನಾಗಢದಲ್ಲಿ ಅಶೋಕನ, ಶಕಕ್ಷತ್ರಪರ ಹಾಗೂ ಗುಪ್ತರ ಶಾಸನಗಳು ದೊರೆತಿವೆ. ಗಿರ್ನಾರ್ ಬೆಟ್ಟದ ತುದಿಯಿಂದ 600' ಕೆಳಕ್ಕೆ ಹಾಗೂ ಸಮುದ್ರಮಟ್ಟದಿಂದ 3,000' ಎತ್ತರದಲ್ಲಿ ಬೆಟ್ಟವನ್ನು ಕೊರೆದು 16 ಗುಹಾಲಯಗಳನ್ನು ಕಾಲಕ್ರಮದಲ್ಲಿ ಕೊರೆಯಲಾಗಿದೆ. ಇವುಗಳ ಪೈಕಿ ನೇಮಿನಾಥ ಗುಹಾಲಯ ಅತ್ಯಂತ ವಿಶಾಲವಾದ್ದು. 195' ಉದ್ದ ಮತ್ತು 130' ಅಗಲದ ಆವರಣವನ್ನು ಕೊರೆದು ಮಧ್ಯದಲ್ಲಿ ಆಲಯವನ್ನು ಬಿಡಿಸಲಾಗಿದೆ. ಆವರಣದಲ್ಲಿ 70 ಗುಹೆಗಳನ್ನು ಕೊರೆದು ಅವುಗಳಲ್ಲಿ ಪದ್ಮಾಸನಾರೂಢರಾಗಿ ಕುಳಿತಿರುವ ಬೇರೆ ಬೇರೆ ತೀರ್ಥಂಕರರ ಹಾಗೂ ದೇವತೆಗಳ ಆಕೃತಿಗಳನ್ನು ಕೆತ್ತಲಾಗಿದೆ. ನೇಮಿನಾಥ ಗುಹಾಲಯದ ಕಂಬಗಳನ್ನು ಸುಂದರವಾದ ಶಿಲ್ಪಗಳಿಂದ ಅಲಂಕರಿಸಲಾಗಿದೆ. ಜುನಾಗಢದಿಂದ 48 ಕಿ.ಮೀ. ದೂರದಲ್ಲಿರುವ ಢಂಕ್ ಗ್ರಾಮದ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರಾಚೀನ ಕಾಲದಲ್ಲಿ ಕೊರೆಯಲಾದ ಹಲವು ಗುಹಾಲಯಗಳುಂಟು. ಶತ್ರುಂಜಿ ನದೀ ಮುಖಜಭೂಮಿಯಲ್ಲಿರುವ ತಳಜ ಬೆಟ್ಟದಲ್ಲಿ 36 ಬೌದ್ಧ ಗುಹಾಲಯಗಳಿವೆ. ಇವುಗಳಲ್ಲೆಲ್ಲ ಅತ್ಯಂತ ದೊಡ್ಡದು ಎಬ್ಬಲ್ ಮಂಟಪ.

ಆಂಧ್ರ ಪ್ರದೇಶದಲ್ಲಿ ಶಾತವಾಹನರ ಆಳ್ವಿಕೆಯ ಕಾಲದಲ್ಲಿ ಗುಹಾಲಯಗಳು ನಿರ್ಮಿತವಾದುವು. ಕೃಷ್ಣಾ ಜಿಲ್ಲೆಯ ಗುಂಟುಪಲ್ಲಿ ಮತ್ತು ವಿಶಾಖಪಟ್ಟಣ ಜಿಲ್ಲೆಯ ಶಂಕರ ಬೆಟ್ಟಗಳಲ್ಲಿರುವ ಆಲಯಗಳು ಶಾತವಾಹನರ ಆಳ್ವಿಕೆಯ ಪ್ರಾರಂಭದಲ್ಲಿ ಕೊರೆಯಲಾದವು. ಶಂಕರ ಬೆಟ್ಟದ ಬೌದ್ಧ ಗುಹಾಲಯಗಳು ಕ್ರಿ. ಶ. 350 ರ ಸುಮಾರಿನಲ್ಲಿ ಕೊರೆಯಲಾದಂಥವು. ಅವು ಗುಂಟುಪಲ್ಲಿಯ ಗುಹಾಲಯಗಳನ್ನೇ ಹೋಲುತ್ತವೆ. ಜಗ್ಗಯ್ಯಪೇಟ, ಭಟ್ಟಿಪ್ರೋಲು, ಗುಡಿವಾಡ, ಘಂಟಸಾಲ, ಅಮರಾವತಿ, ನಾಗಾರ್ಜುನಕೊಂಡ ಮತ್ತು ಇತರ ಸ್ಥಳಗಳಲ್ಲೂ ಬೌದ್ಧ ಸ್ತೂಪಗಳಿವೆ. ಪಶ್ಚಿಮ ಘಟ್ಟಗಳಲ್ಲಿ ಮಹಾರಾಷ್ಟ್ರದ ಅನೇಕ ಗುಹಾಲಯಗಳು ಶಾತವಾಹನರ ಕಾಲದವು. ಕೊಂಡಾನೆ, ಭಾಜ, ಬಿಡ್ಸ, ಕಾರ್ಲೆ, ಅಜಂತ, ನಾಸಿಕ್, ನಾನಾಘಾಟ್ ಮೊದಲಾದ ಸ್ಥಳಗಳಲ್ಲಿ ಕ್ರಿ. ಪೂ. 2 ರಿಂದ ಕ್ರಿ. ಶ. 2ನೆಯ ಶತಮಾನದ ಕೊನೆಯವರೆಗೆ ಹೀನಯಾನ ಪಂಥದ ಗುಹಾಲಯಗಳು ಹೆಚ್ಚು ಸಂಖ್ಯೆಯಲ್ಲಿ ನಿರ್ಮಾಣವಾದುವು. ಇವು ಗಾತ್ರ, ಆಕಾರ ಮತ್ತು ನಮೂನೆಯಲ್ಲಿ ವಿಭಿನ್ನವಾಗಿವೆ. ನಾಸಿಕದ ಬಳಿಯಲ್ಲಿರುವ ಬೇರೆ ಬೇರೆ ಗುಹಾಲಯಗಳು ಕ್ರಿ. ಶ. 1ನೆಯ ಶತಮಾನದಲ್ಲಿ ಕೊರೆಯಲಾದವು. ಅಲ್ಲಿರುವ ಆಲಯಗಳಲ್ಲಿ 3 ನೆಯದು ಗೌತಮೀಪುತ್ರ ಗುಹಾಲಯವೆಂದೂ 8ನೆಯದು ನಹಪಾಣ ಎಂದೂ 15ನೆಯದು ಯಜ್ಞಶ್ರೀ (ಶ್ರೀಯಜ್ಞ) ಎಂದೂ ಶಾಸನಗಳಿಂದ ತಿಳಿದುಬರುತ್ತದೆ. ಅಲ್ಲಿಯ ಗುಹಾಲಯಗಳಲ್ಲಿ ಸಾಮಾನ್ಯವಾಗಿ ಕಂಬಗಳಿಂದ ಕೂಡಿದ ವಿಶಾಲ ಮುಖಮಂಟಪಗಳೂ ಕಂಬಗಳಿಲ್ಲದ ವಿಶಾಲ ಅಂಗಗಳೂ ಬೌದ್ಧಯತಿಗಳಿಗಾಗಿ ಚಿಕ್ಕ ಚಿಕ್ಕ ಕೋಣೆಗಳೂ ಇವೆ. ಜುನ್ನಾರ್ ಮತ್ತು ಭಿಡ್ಸ ಬಳಿಯ ಗುಹಾಲಯಗಳೂ ಮೇಲ್ಕಂಡ ಮಾದರಿಯವೇ.

ಕನ್ನಡ ನಾಡಿನ ಅನೇಕ ಸ್ಥಳಗಳಲ್ಲಿ ಪ್ರಾಚೀನ ಗುಹಾಲಯಗಳಿವೆ. ಇವುಗಳಲ್ಲೆಲ್ಲ ಬಾದಾಮಿಯವು ಅತ್ಯಂತ ಪ್ರಸಿದ್ಧವಾದವು. ಚಾಳುಕ್ಯರ ರಾಜಧಾನಿಯಾಗಿದ್ದ ಬಾದಾಮಿಯ ಗುಡ್ಡಗಳಲ್ಲಿ ನಾಲ್ಕು ಗುಹಾಲಯಗಳು ಕ್ರಿ.ಶ. 6ನೆಯ ಶತಮಾನದಲ್ಲಿ 1ನೆಯ ಕೀರ್ತಿವರ್ಮ ಮತ್ತು ಮಂಗಳೇಶರ ಆಳ್ವಿಕೆಯ ಕಾಲದಲ್ಲಿ ನಿರ್ಮಾಣವಾದವು. ಪ್ರತಿಯೊಂದು ಗುಹಾಲಯದಲ್ಲೂ ಒಂದು ಮುಖಮಂಟಪವೂ ಗರ್ಭಗುಡಿಯೂ ಇವೆ. ಸುಂದರವಾಗಿ ಕೆತ್ತಲಾಗಿರುವ ದೇವತೆಗಳ ಆಳೆತ್ತರ ಶಿಲ್ಪಗಳಿವೆ. ಮೊದಲನೆಯ ಗುಹಾಲಯ ಶಿವಾಲಯ. ಇಲ್ಲಿ ಹದಿನೆಂಟು ಬಾಹುಗಳಿಂದ ಕೂಡಿರುವ ಶಿವನಟರಾಜ, ನಂದಿ, ನಾರದ, ಮಹಿಷಾಸುರಮರ್ಧಿನಿ, ಹರಿಹರ, ಅರ್ಧನಾರೀಶ್ವರ ಮೊದಲಾದ ಆಕೃತಿಗಳನ್ನು ಅಂದವಾಗಿ ಕೆತ್ತಲಾಗಿದೆ. ಎರಡನೆಯದು ವೈಷ್ಣವ ಗುಹಾಲಯ, ಇದರ ಬಾಗಿಲಿನ ಇಕ್ಕೆಲಗಳಲ್ಲೂ 5' 10" ಎತ್ತರದ ದ್ವಾರಪಾಲಕರ ವಿಗ್ರಹಗಳೂ ಮಕರ ತೋರಣಗಳೂ ಕೈಸಾಲೆಯಲ್ಲಿ ವಿಷ್ಣುವಿನ ವರಾಹಾವತಾರ ಮತ್ತು ವಾಮನಾವತಾರಗಳ ಕೃತಿಗಳೂ ಇವೆ. ಮೂರನೆಯ ಗುಹಾಲಯವೂ ವಿಷ್ಣುವಿನದು. ಇದು ಅಲ್ಲಿಯ ಗುಹಾಲಯಗಳಲ್ಲೆಲ್ಲ ಅತ್ಯಂತ ದೊಡ್ಡದು ಮತ್ತು ಭವ್ಯವಾದ್ದು. ಭಾರತದಲ್ಲಿರುವ ವೈದಿಕ ಧರ್ಮೀಯರ ಗುಹಾಲಯಗಳಲ್ಲೆಲ್ಲ ಇದು ಅತ್ಯಂತ ಮಹತ್ವವಾದ್ದೆಂದು ಪರಿಗಣಿಸಲಾಗಿದೆ. ಇದು ಮಂಗಳೇಶನ ಕಾಲದಲ್ಲಿ ಕೊರೆಯಲ್ಪಟ್ಟು ಅವನ ಒಂದು ಶಾಸನವನ್ನೊಳಗೊಂಡಿದೆ. ಈ ಗುಹಾಲಯದ ವಿಶಾಲವಾದ ಮುಖ ಮಂಟಪದ ಒಂದು ಪಕ್ಕದಲ್ಲಿ ಶೇಷಶಯನ ವಿಷ್ಣುವಿನ ಭವ್ಯ ಶಿಲ್ಪವನ್ನು ಕಡೆಯಲಾಗಿದೆ. ಚತುರ್ಭುಜಗಳಿಂದ ಕೂಡಿದ ಈ ಮೂರ್ತಿಯ ಕೈಯಲ್ಲಿ ಶಂಖ, ಚಕ್ರ, ಗದೆ ಮತ್ತು ಫಲ ಇವೆ. ಅವನಿಗೆದುರಿನಲ್ಲಿ ಲಕ್ಷ್ಮೀಯನ್ನೂ ಪಕ್ಕದಲ್ಲಿ ವಿಷ್ಣುವಿನ ವಾಹನ ಗರುಡವನ್ನೂ ಪರಿಚಾರಿಕೆಯರನ್ನೂ ಕಡೆಯಲಾಗಿದೆ. ಮತ್ತೊಂದು ಪಕ್ಕದಲ್ಲಿರುವುದು ವಿಷ್ಣುವಿನ ವರಾಹಾವತಾರ. ವಿಷ್ಣುವಿನ ವಿರಾಡ್ರೂಪ, ಶಿವ, ಬ್ರಹ್ಮ, ಇಂದ್ರ, ಕಾಮ, ದಿಕ್ಪಾಲಕರು, ಮುಂತಾದವರ ಶಿಲ್ಪಗಳು ಮನೋಹರವಾಗಿವೆ. ಬಾದಾಮಿಯಲ್ಲಿ ಗುಡ್ಡದ ಆಲಯಗಳಲ್ಲಿ ನಾಲ್ಕನೆಯದು ಜೈನ ಆಲಯ. ಇದು ಗಾತ್ರದಲ್ಲಿ ಇತರ ಗುಹಾಲಗಳಿಗಿಂತ ಚಿಕ್ಕದು. ಇಲ್ಲಿ ಆದಿನಾಥನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಬಾದಾಮಿಯ ಆಲಯಗಳಂಥ ಎರಡು ಗುಹಾಲಯಗಳು ಐಹೊಳೆಯಲ್ಲೂ ಇವೆ. ಒಂದು ಶೈವ. ರಾವಣಫಡಿ ಎಂದು ಅದರ ಹೆಸರು. ಇದು ಹೊರನೋಟಕ್ಕೆ ವಿಶಿಷ್ಟವಾಗಿ ಕಂಡುಬರುವುದಿಲ್ಲ. ಆದರೆ ಇಲ್ಲಿಯ ಅರ್ಧನಾರೀಶ್ವರ, ಗಂಗಾಧರ ಮುಂತಾದ ಮೂರ್ತಿಗಳನ್ನು ಬಾದಾಮಿಯ ಗುಹೆಗಳಲ್ಲಿಯ ಇಂತಹವೇ ಮೂರ್ತಿಗಳೊಡನೆ ಹೋಲಿಸಬಹುದು. ಇನ್ನೊಂದು ಜೈನಗುಹೆ. ಇಲ್ಲಿ ನೇಮಿನಾಥ ಮತ್ತು ಪಾಶ್ರ್ವನಾಥರ ಮಹಾ ವೀರನ ಮೂರ್ತಿಗಳಿವೆ. ಈ ಗುಹೆಗೆ ಒಂದು ಪಡಸಾಲೆ ಮತ್ತು ಅದರೊಳಗೆ ಒಂದು ಅಂಕಣ ಇವೆ. ಅಂಕಣದ ಎರಡೂ ಕಡೆ ಕೋಷ್ಠವುಂಟು. ಈ ಗುಹೆಯನ್ನು ಮೇಗುಟಿ ಗುಡಿಯ ಕೆಳಗೆ, ಗುಡ್ಡದ ಹಿಂಬದಿಯ ಇಳಿಜಾರಿನ ಬಂಡೆಯೊಂದನ್ನು ಕೊರೆದು ಮಾಡಲಾಗಿದೆ. ಶ್ರವಣಬೆಳಗೊಳ, ಶಿವಗಂಗೆ, ಮುಳ್ಳಯ್ಯನಗಿರಿ ಮೊದಲಾದ ಕಡೆಗಳಲ್ಲೂ ಗುಹಾಲಯಗಳನ್ನು ಕೊರೆಯಲಾಗಿದೆ. 

ದ್ರಾವಿಡ ಶಿಲ್ಪಶೈಲಿಯನ್ನು ಅನುಷ್ಠಾನಕ್ಕೆ ತಂದ ಪಲ್ಲವ ಸಂತತಿಯ ರಾಜರು ಪ್ರಾರಂಭದಲ್ಲಿ ಗುಹಾಲಯಗಳನ್ನು ಕೊರೆಸಿದರು. ಅಖಂಡ ಶಿಲಾಬಂಡೆಯಿಂದ ಅವರು ಮಹಾಬಲಿಪುರದ ಬಳಿ ಕೆತ್ತಿಸಿರುವ ರಥಗಳು ಜಗತ್ಪ್ರಸಿದ್ಧವಾದವು. ಪಲ್ಲವ 1 ನೆಯ ಮಹೇಂದ್ರವರ್ಮನ್ ಮತ್ತು ಅವನ ಹಿಂದಿನ ರಾಜರು ಗುಹಾಲಯಗಳ ನಿರ್ಮಾಣಕಾರ್ಯದಲ್ಲಿ ಹೆಚ್ಚು ಆಸಕ್ತಿ ವಹಿಸಿದ್ದರು. ಅವರ ಕಾಲದಲ್ಲಿ ದಲವನ್ನೂರು, ಪಲಾ ವರಂ, ಮಹೇಂದ್ರವಾಡಿ, ಉಂಡವಳ್ಳಿ, ಭೈರವಕೊಂಡ ಮೊದಲಾದ ಸ್ಥಳಗಳಲ್ಲಿ ಹದಿನಾಲ್ಕು ಗುಹಾದೇವಾಲಯಗಳು ಕೊರೆಯಲ್ಪಟ್ಟುವು. ಇವು ಮಂಟಪಗಳೆಂದು ಪ್ರಸಿದ್ಧವಾಗಿವೆ. ಮಂಟಪಗಳಲ್ಲಿಯ ಸ್ತಂಭಗಳನ್ನು ನಯವಾಗಿ ಕೆತ್ತಿ ಶಿಲ್ಪಗಳನ್ನು ಬಿಡಿಸಲಾಗಿದೆ. ಪ್ರತಿಯೊಂದು ಗುಹಾಲಯದಲ್ಲೂ ಮುಖಮಂಟಪ ಮತ್ತು ಗರ್ಭಗೃಹ ಇವೆ. ಮಹೇಂದ್ರವರ್ಮನ ಕಾಲದಲ್ಲಿ ಕೊರೆಯಲಾದ ಭೈರವಕೊಂಡ ಹಾಗೂ ಉಂಡವಳ್ಳಿಯ ಅನಂತಶಯನ ಗುಹಾಲಯಗಳು ವಾಸ್ತುಶಿಲ್ಪ ದೃಷ್ಟಿಯಿಂದ ಭವ್ಯವಾಗಿವೆ. ಇವುಗಳಲ್ಲಿ ಅನೇಕ ಮಾರ್ಪಾಡುಗಳಾಗಿವೆ. ಪಲ್ಲವ ನಿರ್ಮಿತ ಗುಹಾಲಯಗಳು ಗುಹಾಲಯ ನಿರ್ಮಾಣ ಕಾಲದ ಕೊನೆಯ ಘಟ್ಟಕ್ಕೆ ಸೇರಿದವೆಂದು ನಿರ್ಣಯಿಸಲಾಗಿದೆ.
ಅಜಂತದ ಗುಹಾದೇವಾಲಯಗಳು ಜಗತ್ಪ್ರಸಿದ್ಧವಾದಂಥವು. ಇಂದಿನ ಮಹಾರಾಷ್ಟ್ರದಲ್ಲಿ ಔರಂಗಾಬಾದಿಗೆ 152 ಕಿ.ಮೀ. ದೂರದಲ್ಲಿ ವಾಘೋರ ನದಿಯ ದಂಡೆಯ ಮೇಲಿರುವ ಕುದುರೆಯ ಲಾಳಾಕಾರದ ಶಿಲಾಮಯ ಗುಡ್ಡದಲ್ಲಿ ಪ್ರಾಚೀನ ಕಾಲದಲ್ಲಿ ವಿಶಾಲವಾದ 30 ಬೌದ್ಧ ಗುಹಾದೇವಾಲಯಗಳು ಬೇರೆ ಬೇರೆ ಕಾಲದಲ್ಲಿ ಕೊರೆಯಲ್ಪಟ್ಟುವು. ಅಜಂತದ ಗುಹಾಲಯಗಳು ಕಲೆ, ಶಿಲ್ಪ, ವರ್ಣಲೇಪನಗಳಲ್ಲಿ ಅಸದೃಶವಾದಂಥವು. ಪ್ರಾಚೀನ ಭಾರತೀಯರ ಕಲಾ ಕೌಶಲಕ್ಕೆ ಸಾಕ್ಷಿಗಳು. ಈ ಚಿತ್ರಗಳಲ್ಲಿ ಕಾಣಿಸುವುದು ಜೀವಕೋಟಿಯಿಂದ ತುಂಬಿದ ಪ್ರಪಂಚ : ಬೆಳೆಯುತ್ತಿರುವ ಗಿಡಗಳು, ಅರಳುತ್ತಿರುವ ಕುಸುಮಗಳು, ಬಗೆಬಗೆಯ ಪಕ್ಷಿಗಳು, ಸುಂದರವಾದ ಹುಲ್ಲೆಗಳು, ಗಂಭೀರವಾದ ಆನೆಗಳು, ಮನೋಹರವಾದ ಬಣ್ಣಗಳಿಂದ ಅಲಂಕೃತವಾದ ಮಂಟಪಗಳು, ಗೃಹಗಳು, ನಗರಗಳ ಮಹಾದ್ವಾರಗಳು, ಅರಮನೆಗಳು, ಇವುಗಳ ಮಧ್ಯೆ ಲಲಿತಕಾಯರಾಗಿ, ರಮ್ಯವಾದ ಭಾವಗಳನ್ನು ಸೂಚಿಸುತ್ತ, ಸ್ವತಂತ್ರವಾಗಿ ಕ್ರೀಡಿಸುತ್ತಲೋ ಧ್ಯಾನಿಸುತ್ತಲೇ ಇರುವ ಗಂಡಸರು, ಹೆಂಗಸರು, ಮಕ್ಕಳು : ಸುಖದುಃಖಮಿಶ್ರಿತ ಲೋಕ. ಈ ನಿಬಿಡ ಲೋಕದ ನಡುವೆ ದಯಾಪೂರಿತನಾದ, ಧ್ಯಾನಾಸಕ್ತನಾದ, ಮಹಾತ್ಮನಾದ ಬುದ್ಧದೇವನ ಬದುಕು. ಇಂಥ ದೃಶ್ಯ ಅಜಂತದ ಚಿತ್ರಗಳಲ್ಲಿ ಪ್ರತ್ಯಕ್ಷವಾಗುತ್ತದೆಯೆಂದು ದಿವಂಗತ ಎಂ.ಎಚ್. ಕೃಷ್ಣ ಅವರು ಹೇಳಿದ್ದಾರೆ. 			(ನೋಡಿ- ಅಜಂತ)

ಅಜಂತದಂತೆಯೇ ಎಲ್ಲೋರದಲ್ಲೂ ಪ್ರಸಿದ್ಧ ಗುಹಾದೇವಾಲಯಗಳಿವೆ. ಅಜಂತ ಬಣ್ಣದ ಚಿತ್ರಗಳಿಂದ ಪ್ರಸಿದ್ಧವಾಗಿರುವಂತೆ ಎಲ್ಲೋರದ ಗುಹಾಲಯಗಳು ವಾಸ್ತುಶಿಲ್ಪಕ್ಕೆ ಪ್ರಸಿದ್ಧವಾಗಿವೆ. ಅಜಂತದಂತ ಎಲ್ಲೋರವು ಮಹಾರಾಷ್ಟ್ರದಲ್ಲಿದೆ. ಎಲ್ಲೋರದ ಗುಹಾಲಯಗಳನ್ನು ಕ್ರಿ. ಶ. 500 ರಿಂದ 900ರ ವರೆಗೆ ಕೊರೆಯಲಾಯಿತೆಂದು ಪರಿಗಣಿಸಲಾಗಿದೆ. ಬಾದಾಮಿಯ ಚಾಳುಕ್ಯರ ಹಾಗೂ ಮಾನ್ಯಖೇಟದ ರಾಷ್ಟ್ರಕೂಟ ಕನ್ನಡರಾಜಮನೆತನಗಳ ಆಳ್ವಿಕೆಯಲ್ಲಿ ಎಲ್ಲೋರದ ಗುಹಾಲಯಗಳು ನಿರ್ಮಾಣವಾದುವು. ಎಲ್ಲೋರದ ಬಳಿಯ ಒಂದೂವರೆ ಮೈ. ಉದ್ದದ 300' ಎತ್ತರದ ಹುಟ್ಟುಬಂಡೆಯಲ್ಲಿ ಉದ್ದಕ್ಕೂ 35 ಗವಿಗಳನ್ನು ಕೊರೆಯಲಾಗಿದೆ. ಮೊದಲಿನ 12 ಗುಹಾಲಯಗಳು ಮಹಾಯಾನ ಬೌದ್ಧ ಪಂಥದವು. ಇವುಗಳಲ್ಲಿ ವಿಶ್ವಕರ್ಮ ಎಂದು ಕರೆಯಲಾಗಿರುವ ಬೌದ್ಧ ಗುಹಾಲಯ ಅತ್ಯಂತ ಭವ್ಯವಾದ್ದು. 11 ಮತ್ತು 12ನೆಯ ಗುಹಾಲಯಗಳು ಎರಡು ಅಂತಸ್ತುಗಳಿಂದ ಕೂಡಿವೆ. ಇದನ್ನು ಕ್ರಮವಾಗಿ ದೋತಾಳ್ ಮತ್ತು ತಿಂತಾಳ್ ಎಂಬ ಹೆಸರಿನಿಂದ ಕರೆಯಲಾಗಿದೆ. 13 ರಿಂದ 29ರ ವರೆಗಿನ ಗುಹಾಲಯಗಳು ವೈದಿಕ ಪಂಥದವು. ಇವುಗಳಲ್ಲೆಲ್ಲ ಅತ್ಯಂತ ಪ್ರಸಿದ್ಧವಾದ 16ನೆಯದಾದ ಕೈಲಾಸ ಗುಹಾ ದೇವಾಲಯ ರಾಷ್ಟ್ರಕೂಟ ಸಾರ್ವಭೌಮ 1ನೆ ಕೃಷ್ಣರ ಕಾಲದಲ್ಲಿ ಕೊರೆಯಲ್ಪಟ್ಟಿತ್ತು. ಕೊನೆಯ 6 ಜೈನ ಪಂಥದ ಗುಹಾಲಯಗಳು. ಇವುಗಳಲ್ಲಿ ಇಂದ್ರ ಸಭೆ ಮತ್ತು ಜಗನ್ನಾಥ ಸಭೆ ಎಂಬ ಗುಹಾಲಯಗಳು ಅತ್ಯಂತ ಸುಂದರವಾಗಿವೆ.
(ನೋಡಿ- ಎಲ್ಲೋರಾ)

ಮುಂಬಯಿಯ ಬಳಿಯ ದೀಪದಲ್ಲಿ ಎಲಿಫೆಂಟಾ ಎಂಬ ಗುಡ್ಡದ ಗುಹಾದೇವಾಲಯಗಳು ಕ್ರಿ. ಶ. 8-9ನೆಯ ಶತಮಾನಗಳಿಗೆ ಸೇರಿದವು. ಎಲಿಫೆಂಟದವು ಗುಹಾ ದೇವಾಲಯ ರಚನೆಯ ಕೊನೆಯ ಘಟ್ಟಕ್ಕೆ ಸೇರಿದವು. ಇಲ್ಲಿಯ ಆಲಯಗಳಲ್ಲಿ ಶೈವ ಪುರಾಣಕ್ಕೆ ಸಂಭಂಧಿಸಿದ ಮನೋಜ್ಞವಾದ ಶಿಲ್ಪಗಳನ್ನು ಕೊರೆಯಲಾಗಿದೆ. ಶಿವ-ಪಾರ್ವತಿಯರ ವಿವಾಹ, ಅರ್ಧನಾರೀಶ್ವರ, ನಟರಾಜ, 3 ಮುಖಗಳ ಶಿವಮೂರ್ತಿ ಮೊದಲಾದ ಶಿಲ್ಪಗಳು ಅತ್ಯಂತ ಸುಂದರವಾಗಿವೆ. ಈ ಶಿಲ್ಪ ಸೌಂದರ್ಯರಾಶಿಯನ್ನು ಹೋಲುವ ಶಿಲ್ಪಕೃತಿಗಳು ಪಾಶ್ಚಾತ್ಯ ರಾಷ್ಟ್ರಗಳಲ್ಲೆಲ್ಲು ಇಲ್ಲ ಎಂದು ಫರ್ಗುಸನ್ ಪ್ರಶಂಸಿಸಿದ್ದಾರೆ.
ಕ್ರಿ. ಪೂ. 3ನೆಯ ಶತಮಾನದಲ್ಲಿ ಅಶೋಕನಿಂದ ಆರಂಭವಾದ ಗುಹಾ ದೇವಾಲಯ ನಿರ್ಮಾಣ ಕಾರ್ಯ ಕ್ರಿ. ಶ. 9ನೆಯ ಶತಮಾನದವರೆಗೂ ಮುಂದುವರಿಯಿತು. ಭಾರತದ ಗುಹಾದೇವಾಲಯಗಳ ಸಂಖ್ಯೆ, ವಿನ್ಯಾಸ, ವರ್ಣಚಿತ್ರ ಶಿಲ್ಪಕಲೆಗಳ ದೃಷ್ಟಿಯಿಂದ ಪ್ರಪಂಚದಲ್ಲೇ ಅಸದೃಶವಾಗಿವೆ.
(ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ